ಬೇರೊಬ್ಬ ನಟನ ಚಿತ್ರವನ್ನು ಪ್ರಶಂಸಿದ ತನ್ನ ಮ್ಯಾನೆಜರ್ ಗೆ ಹಲ್ಲೆ ನಡೆಸಿದ ನಟ ಉನ್ನಿ ಮುಕುಂದನ್: ಆರೋಪ
ಉನ್ನಿ ಮುಕುಂದನ್ | PC: X
ತಿರುವನಂತಪುರಂ: ನಟ ಟೊವಿನೊ ಥಾಮಸ್ ನಟನೆಯ 'ನರಿವೆಟ್ಟ' ಸಿನೆಮಾವನ್ನು ಪ್ರಶಂಸಿಸಿ ನಾನು ಇತ್ತೀಚೆಗೆ ಮಾಡಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ಆಕ್ರೋಶಗೊಂಡು, ನಟ ಉನ್ನಿ ಮುಕುಂದನ್ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಅವರ ವ್ಯವಸ್ಥಾಪಕ ವಿಪಿನ್ ಕುಮಾರ್, ಈ ಸಂಬಂಧ ಇನ್ಪೋಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರೊಂದಿಗೆ, 'ಮ್ಯಾಕ್ರೊ' ಚಿತ್ರದ ನಂತರ ಯಾವುದೇ ಮಹತ್ವದ ಯೋಜನೆಗಳು ದೊರೆಯದಿರುವುದು ಹಾಗೂ ತಮ್ಮ ಇತ್ತೀಚಿನ 'ಗೆಟ್-ಸೆಟ್ ಬೇಬಿ' ಚಿತ್ರ ಸೋತಿದ್ದರಿಂದ ಹತಾಶರಾಗಿ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದೂ ಅವರು ಆಪಾದಿಸಿದ್ದಾರೆ.
ನಟ ಉನ್ನಿ ಮುಕುಂದನ್ ಅವರು ನನ್ನ ಅಪಾರ್ಟ್‌ಮೆಂಟ್ ಸಂಕೀರ್ಣದ ಆವರಣದಲ್ಲಿ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿ, ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ವಿಪಿನ್ ಕುಮಾರ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ನಟ ಉನ್ನಿ ಮುಕುಂದನ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
"ನಾನು ಆರು ವರ್ಷಗಳ ಕಾಲ ನಟ ಉನ್ನಿ ಮುಕುಂದನ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ನಾನು ವಾಸಿಸುತ್ತಿರುವ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ ಅವರು, ನನ್ನನ್ನು ನನ್ನ ಫ್ಲ್ಯಾಟ್‌ನಿಂದ ಹೊರ ಬರುವಂತೆ ಕರೆದು, ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿನ ವಾಹನ ನಿಲುಗಡೆ ಸ್ಥಳದರ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ" ಎಂದೂ ಅವರು ಆರೋಪಿಸಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೆ, ಮಲಯಾಳಂ ನಟ ಉನ್ನಿ ಮುಕುಂದನ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.