×
Ad

ವಿಜಯ್ ತುಂಬಾ ಹೊತ್ತು ವಾಹನದ ಒಳಗಿದ್ದಾಗ ಜನರು ಚಡಪಡಿಸಿದರು: ಎಫ್‌ಐಆರ್

ಟಿವಿಕೆ ಪಕ್ಷದ 3 ನಾಯಕರ ವಿರುದ್ಧ ಮೊಕದ್ದಮೆ

Update: 2025-09-29 21:45 IST

ನಟ ಹಾಗೂ ರಾಜಕಾರಣಿ ವಿಜಯ್ | Photo Credit :PTI

ಚೆನ್ನೈ, ಸೆ. 29: ತಮಿಳುನಾಡಿನ ಕರೂರ್ ಜಿಲ್ಲೆಯ ವೇಲುಸಮೈಪುರಮ್‌ ನಲ್ಲಿ ಶನಿವಾರ ನಡೆದ ತನ್ನ ಸಾರ್ವಜನಿಕ ಸಭೆಯ ವೇಳೆ, ತಮಿಳುನಾಡು ನಟ ಹಾಗೂ ರಾಜಕಾರಣಿ ವಿಜಯ್ ತುಂಬಾ ಸಮಯ ತನ್ನ ಪ್ರಚಾರ ವಾಹನದ ಒಳಗಡೆಯೇ ಇದ್ದರು; ಇದು ಅಲ್ಲಿ ಕಿಕ್ಕಿರಿದು ಸೇರಿದ್ದ ಜನರ ಚಡಪಡಿಕೆಗೆ ಕಾರಣವಾಯಿತು ಎಂದು ಕಾಲ್ತುಳಿತ ಘಟನೆಯ ಕುರಿತ ಮೊದಲ ಮಾಹಿತಿ ವರದಿ (ಎಫ್‌ಐಆರ್)ಯಲ್ಲಿ ಹೇಳಲಾಗಿದೆ.

ವಿಜಯ್‌ರ ಸಾರ್ವಜನಿಕ ಸಭೆಯಲ್ಲಿ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 41 ಮಂದಿ ಮೃತಪಟ್ಟಿದ್ದಾರೆ.

ಪೊಲೀಸರು ತಮಿಳಗ ವೆಟ್ರಿ ಕಳಗಮ್ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ವಿರುದ್ಧ ಯಾವುದೇ ಮೊಕದ್ದಮೆ ದಾಖಲಿಸಿಲ್ಲ. ಆದರೆ ಪಕ್ಷದ ಮೂವರು ಪ್ರಮುಖ ನಾಯಕರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಮೊಕದ್ದಮೆಯಲ್ಲಿ ಹೆಸರಿಸಲಾಗಿರುವ ಟಿವಿಕೆ ಪಕ್ಷದ ಮೂವರು ಪ್ರಮುಖ ಪದಾಧಿಕಾರಿಗಳೆಂದರೆ: ಪಕ್ಷದ ಕರೂರ್ ಉತ್ತರ ಜಿಲ್ಲೆಯ ಕಾರ್ಯದರ್ಶಿ ಮದಿಯಳಗನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬಸ್ಸಿ ಆನಂದ್ ಮತ್ತು ಉಪ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್.

ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿಧಿ 105 (ಕೊಲೆಯಲ್ಲದ ಮಾನವ ಹತ್ಯೆ, ವಿಧಿ 110 (ಮಾನವ ಹತ್ಯೆಗೆ ಪ್ರಯತ್ನ), ವಿಧಿ 125 (ಇತರರ ಪ್ರಾಣಗಳನ್ನು ಅಪಾಯಕ್ಕೆ ಗುರಿಪಡಿಸುವುದು) ಮತ್ತು ವಿಧಿ 223 (ಆದೇಶ ಉಲ್ಲಂಘನೆ)ರಡಿ ಮತ್ತು ತಮಿಳುನಾಡು ಸಾರ್ವಜನಿಕ ಸೊತ್ತು (ಹಾನಿ ಮತ್ತು ನಷ್ಟ ತಡೆ) ಕಾಯ್ದೆ, 1992ರ ವಿಧಿ 3ರಡಿ ಆರೋಪಗಳನ್ನು ಹೊರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.

ವಿಜಯ್ ಸಾರ್ವಜನಿಕ ಸಭೆಯ

ಮೈದಾನದಲ್ಲಿ ತನ್ನ ಪ್ರಚಾರ ವಾಹನದ ಒಳಗೆಯೇ ತುಂಬಾ ಹೊತ್ತು ಕುಳಿತಿದ್ದರು ಹಾಗೂ ಅದು ಜನಸಂದಣಿ ಮತ್ತು ಜನರ ಚಡಪಡಿಕೆಗೆ ಕಾರಣವಾಯಿತು ಎಂದು ಪೊಲೀಸರು ತಮ್ಮ FIR ವರದಿಯಲ್ಲಿ ಹೇಳಿದ್ದಾರೆ.

ವಿಜಯ್‌ ರನ್ನು ಹತ್ತಿರದಿಂದ ನೋಡಲು ಜನರು ಮುಂದಕ್ಕೆ ಬಂದಾಗ ಪರಿಸ್ಥಿತಿ ನಿಯಂತ್ರಣ ಮೀರಿತು ಹಾಗೂ ಕಿರಿದಾದ ಮೈದಾನದ ಸಾಮರ್ಥ್ಯವನ್ನು ಮೀರಿ ಜನರು ಅಲ್ಲಿ ನೆರೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಭೆಯಲ್ಲಿದ್ದವರ ಪೈಕಿ ಹಲವರು ನಟನನ್ನು ನೋಡುವುದಕ್ಕಾಗಿ ಸ್ಟೀಲ್ ಶೆಡ್‌ ಗಳು ಮತ್ತು ಮರಗಳನ್ನು ಹತ್ತಿದರು. ಅವುಗಳು ಕುಸಿದು ಕೆಳಗೆ ನಿಂತಿದ್ದವರ ಮೇಲೆ ಬಿದ್ದವು. ಅದು ಕಾಲ್ತುಳಿತಕ್ಕೆ ಕಾರಣವಾಯಿತು. ಆಗ ಜನರು ಉಸಿರುಗಟ್ಟಿ ಮತ್ತು ತುಳಿತದ ಗಾಯಗಳಿಂದಾಗಿ ಪ್ರಾಣ ಕಳೆದುಕೊಂಡರು ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.

ಸುವ್ಯವಸ್ಥೆಯನ್ನು ಮರಳಿ ತರುವುದಕ್ಕಾಗಿ ತಾವು ಲಾಠಿಚಾರ್ಜ್ ಮಾಡಿದೆವು ಎಂದು ಪೊಲೀಸರು ಹೇಳಿದ್ದಾರೆ. ಮೈದಾನದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಹಲವರನ್ನು ಕರೂರ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News