ಕರೂರು ಕಾಲ್ತುಳಿತ ಪ್ರಕರಣ | ನಾಳೆ ಅ.27ರಂದು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಲಿರುವ ನಟ ವಿಜಯ್
ಟಿವಿಕೆ ಮುಖ್ಯಸ್ಥ ವಿಜಯ | Photo Credit : PTI
ಚೆನ್ನೈ,ಅ.26: ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಅವರು ಸೋಮವಾರ ಮಾಮಲ್ಲಾಪುರಂನ ಖಾಸಗಿ ಹೋಟೆಲ್ಲೊಂದರಲ್ಲಿ ಕರೂರು ಕಾಲ್ತುಳಿತ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳನ್ನು ಭೇಟಿಯಾಗಲಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ ಸಂತ್ರಸ್ತ ಕುಟುಂಬಗಳನ್ನು ಕರೂರು ಮತ್ತು ಇತರ ಕೆಲವು ಜಿಲ್ಲೆಗಳಿಂದ ಮಾಮಲ್ಲಾಪುರಂಗೆ ಕರೆತರಲು ಟಿವಿಕೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ.
ಇದು ಸಂಪೂರ್ಣವಾಗಿ ಖಾಸಗಿ ಕಾರ್ಯಕ್ರಮವಾಗಿದ್ದು, ಮಾಧ್ಯಮಗಳಿಗೆ ಪ್ರವೇಶಾವಕಾಶದ ಸಾಧ್ಯತೆಯಿಲ್ಲ. ವಿಜಯ್ ಅವರು ವೈಯಕ್ತಿಕವಾಗಿ ಪ್ರತಿಯೊಂದೂ ಕುಟುಂಬದ ಜೊತೆ ಮಾತನಾಡಲಿದ್ದಾರೆ ಎಂದು ಪಕ್ಷದ ಪದಾಧಿಕಾರಿಯೋರ್ವರು ತಿಳಿಸಿದರು. ಪೋಲಿಸ್ ಅಧಿಕಾರಿಯೋರ್ವರು ಇದನ್ನು ದೃಢಪಡಿಸಿದರು.
ವಿಜಯ್ ಕರೂರಿಗೆ ತಾನು ಖುದ್ದಾಗಿ ಭೇಟಿ ನೀಡುವುದಾಗಿ ಈ ಹಿಂದೆ ಪ್ರಕಟಿಸಿದ್ದರಾದರೂ, ಕಾರಣಾಂತರಗಳಿಂದ ಸ್ಥಳವನ್ನು ಬದಲಿಸಬೇಕಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಟಿವಿಕೆ ದೀಪಾವಳಿಗೆ ಮುನ್ನ ಕರೂರು ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ರೂಪಾಯಿಗಳ ಪರಿಹಾರವನ್ನು ವಿತರಿಸಿತ್ತು.
ಸೆ.27ರಂದು ಕರೂರಿನಲ್ಲಿ ಟಿವಿಕೆ ರ್ಯಾಲಿ ಸಂದರ್ಭದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟು, 60ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.