ಭಾರತಕ್ಕೆ ರಶ್ಯಾ ಅಧ್ಯಕ್ಷ ಪುಟಿನ್ ಭೇಟಿ: ದಿಲ್ಲಿಯಲ್ಲಿ ಹೈ ಅಲರ್ಟ್
Update: 2025-12-04 13:21 IST
ಹೊಸದಿಲ್ಲಿ: ಎರಡು ದಿನಗಳ ಭೇಟಿಗಾಗಿ ಗುರುವಾರ ಸಂಜೆ ವೇಳೆಗೆ ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರಾಷ್ಟ್ರ ರಾಜಧಾನಿ ದಿಲ್ಲಿಗೆ ಬಂದಿಳಿಯಲಿದ್ದಾರೆ. ಇದರಿಂದಾಗಿ ನಗರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ರಾಜಧಾನಿಯಾದ್ಯಂತ ಭದ್ರತೆಯ ಭಾಗವಾಗಿ ವಿಶೇಷ ಆಯುಧ ಮತ್ತು ಯೋಜನಾ ತಂಡ ಹಾಗೂ ಶ್ವಾನದಳಗಳನ್ನು ನಿಯೋಜಿಸಲಾಗಿದೆ.
ತಮ್ಮ ಎರಡು ದಿನಗಳ ಭಾರತ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದಲ್ಲಿ ಆಯೋಜನೆಗೊಂಡಿರುವ ಖಾಸಗಿ ಭೋಜನ ಕೂಟದಲ್ಲಿ ವ್ಲಾದಿಮಿರ್ ಪುಟಿನ್ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಪುಟಿನ್ ಹಾಗೂ ಮೋದಿ ಇಬ್ಬರೂ 23ನೇ ಭಾರತ-ರಶ್ಯಾ ವಾರ್ಷಿಕ ವ್ಯೂಹಾತ್ಮಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪುಟಿನ್ ಭೇಟಿ ಹಿನ್ನೆಲೆ ದಿಲ್ಲಿಯಾದ್ಯಂತ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ರಶ್ಯಾ ಅಧ್ಯಕ್ಷರ ಆಗಮನದ ಹಿನ್ನೆಲೆ ದಿಲ್ಲಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.