×
Ad

Fact Check | ಅಹಮದಾಬಾದ್ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕನನ್ನು ಬಂಧಿಸಲಾಗಿದೆಯೆ?

Update: 2025-07-02 18:00 IST

PC : reuters.com

ಹೊಸದಿಲ್ಲಿ: ಜೂನ್ 12ರಂದು ಅಹಮದಾಬಾದ್ ನಿಂದ ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದ ನಂತರ, ಈ ಅಪಘಾತದಲ್ಲಿ ಬದುಕುಳಿದಿದ್ದ ಏಕೈಕ ಪ್ರಯಾಣಿಕನನ್ನು ಸುಳ್ಳು ಪ್ರತಿಪಾದನೆ ಮಾಡಿದ ಆರೋಪದ ಮೇಲೆ ಕೇವಲ 48 ಗಂಟೆಗಳೊಳಗೆ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಜೂನ್ 12ರಂದು ಲಂಡನ್ ಗೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನದ ಆಸನ ಸಂಖ್ಯೆ 11A ಪ್ರಯಾಣಿಕರಾಗಿದ್ದ ವಿಶ್ವಾಸ್ ಕುಮಾರ್ ರಮೇಶ್, ವಿಮಾನದ ತುರ್ತು ನಿರ್ಗಮನ ದ್ವಾರದ ಬಳಿ ಕುಳಿತಿದ್ದರು. ಹೀಗಾಗಿ, ವಿಮಾನ ನೆಲಕ್ಕೆ ಅಪ್ಪಳಿಸಿ, ಅಪಘಾತಕ್ಕೀಡಾಗುವುದಕ್ಕೂ ಮುನ್ನ, ತುರ್ತು ನಿರ್ಗಮನ ದ್ವಾರವನ್ನು ತೆರೆದು, ಅವರು ಅಪಘಾತದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದರು ಎಂದು ಆರಂಭದಲ್ಲಿ ವರದಿಯಾಗಿತ್ತು.

ಡ್ರೀಮ್ ಲೈನರ್ 787-8 ವಿಮಾನವು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯದ ಮೇಲೆ ಪತನಗೊಂಡಿದ್ದರಿಂದ, ವಿಮಾನದಲ್ಲಿದ್ದ 242 ಪ್ರಯಾಣಿಕರ ಪೈಕಿ 241 ಪ್ರಯಾಣಿಕರು ಮೃತಪಟ್ಟು, ನೆಲದಡಿಯಿದ್ದ ಹಲವು ವ್ಯಕ್ತಿಗಳೂ ಬಲಿಯಾಗಿದ್ದರು.

ಈ ಘಟನೆಯ ಬೆನ್ನಿಗೇ, ಜೂನ್ 18ರಂದು ಟಿಕ್ ಟಾಕ್ ನಲ್ಲಿ ವೈರಲ್ ಆಗಿದ್ದ ವೀಡಿಯೊವೊಂದರಲ್ಲಿ ವಿಮಾನ ಅಪಘಾತ ಸಂಭವಿಸಿದ ಕೇವಲ 48 ಗಂಟೆಗಳೊಳಗಾಗಿ ಪೊಲೀಸರು ಅಪಘಾತದಲ್ಲಿ ಬದುಕುಳಿದಿರುವ ವಿಶ್ವಾಸ್‌ ಕುಮಾರ್ ರಮೇಶ್ ರನ್ನು ಬಂಧಿಸಿದ್ದು, ಅವರನ್ನು ಅಹಮದಾಬಾದ್ ಕಾರಾಗೃಹದಲ್ಲಿರಿಸಿದ್ದಾರೆ ಎಂದು ಪ್ರತಿಪಾದಿಸಿತ್ತು.

ಮತ್ತೊಂದು ವೀಡಿಯೊದಲ್ಲಿ, “ದುಡ್ಡಿಗಾಗಿ ಅವಸರದಲ್ಲಿರುವ ಈ ವ್ಯಕ್ತಿಯನ್ನು ನೀವು ಗುರುತಿಸಬಲ್ಲಿರಾ?” ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದರು. ಈ ವೀಡಿಯೊಗೆ 1,40,000 ವೀಕ್ಷಣೆ ದಕ್ಕಿತ್ತು.

ಆದರೆ, ವಿಶ್ವಾಸ್‌ ಕುಮಾರ್ ರಮೇಶ್ ರನ್ನು ಬಂಧಿಸಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಹೀಗಿದ್ದೂ, ಅಪಘಾತದ ತನಿಖೆಯ ನೇತೃತ್ವ ವಹಿಸಿರುವ ವಿಮಾನ ಅಪಘಾತ ತನಿಖಾ ದಳವಾಗಲಿ ಅಥವಾ ಭಾರತದ ನಾಗರಿಕ ವಿಮಾನ ಯಾನ ಸಚಿವಾಲಯವಾಗಲಿ ಅಪಘಾತದಲ್ಲಿ ವಿಶ್ವಾಸ್‌ ಕುಮಾರ್ ರಮೇಶ್ ಪಾತ್ರವಿರುವ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಅಹಮದಾಬಾದ್ ಪೊಲೀಸರು ಸಾಮಾನ್ಯವಾಗಿ ತಮ್ಮ ಪ್ರಕಟನೆಗಳನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡುತ್ತಾರಾದರೂ, ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಬಂಧನವಾಗಿರುವ ಕುರಿತು ತಮ್ಮ ಪ್ರಕಟನೆಗಳಲ್ಲಿ ಉಲ್ಲೇಖಿಸಿಲ್ಲ.

ಆದರೆ, ಜೂನ್ 14ರಂದು “ಎಲ್ಲವೂ ನಕಲಿ” ಎಂಬ ವಿವರಣೆ ಹೊಂದಿರುವ ಖಾತೆಯಿಂದ ಮಾಡಲಾಗಿರುವ ಮಾಡಲಾಗಿದ್ದ ಹಾಗೂ ಸದ್ಯ ಅಳಿಸಿ ಹಾಕಲಾಗಿರುವ ಟಿಕ್ ಟಾಕ್ ವೀಡಿಯೊ ಪೋಸ್ಟ್ ನಿಂದ ಈ ಸುದ್ದಿ ಜನ್ಮ ತಳೆದಿದೆ ಎಂಬ ಸಂಗತಿ Reuters ಸುದ್ದಿ ಸಂಸ್ಥೆಯ ಆರಂಭಿಕ ಸತ್ಯಶೋಧನೆಯಲ್ಲಿ ಪತ್ತೆಯಾಗಿದೆ.

ಜೂನ್ 18ರಂದು ನಡೆದ ಈ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಸಂತ್ರಸ್ತರ ಪೈಕಿ ಒಬ್ಬರಾಗಿದ್ದ ತಮ್ಮ ಸಹೋದರ ಅಜಯ್ ರಮೇಶ್ ಅಂತ್ಯಕ್ರಿಯೆಯಲ್ಲಿ ವಿಶ್ವಾಸ್‌ ಕುಮಾರ್ ರಮೇಶ್ ಕೂಡಾ ಭಾಗಿಯಾಗಿದ್ದರು.

ಈ ಕುರಿತು ಪ್ರತಿಕ್ರಿಯೆಗಾಗಿ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯದ ವಕ್ತಾರರು ಹಾಗೂ ಅಹಮದಾಬಾದ್ ಪೊಲೀಸರನ್ನು Reuters ಸುದ್ದಿ ಸಂಸ್ಥೆ ಸಂಪರ್ಕಿಸಿದಾಗ, ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ನಾಗರಿಕ ವಿಮಾನ ಯಾನ ಸಚಿವಾಲಯ ಕೂಡಾ, ಈ ಕುರಿತು ಸಚಿವಾಲಯ ಪ್ರಕಟಿಸಿರುವ ಪತ್ರಿಕಾ ಪ್ರಕಟನೆಗಳನ್ನು ಗಮನಿಸುವಂತೆ ಈ ಸಂಬಂಧ ಪ್ರತಿಕ್ರಿಯೆ ಕೋರಿದ Reuters ಸುದ್ದಿ ಸಂಸ್ಥೆಗೆ ನಿರ್ದೇಶನ ನೀಡಿದೆ.

ಈ ಕುರಿತು ಪ್ರತಿಕ್ರಿಯೆಗಾಗಿ ವಿಶ್ವಾಸ್‌ ಕುಮಾರ್ ರಮೇಶ್ ಕುಟುಂಬದ ಸದಸ್ಯರನ್ನು ಪದೇ ಪದೇ ಸಂಪರ್ಕಿಸಿದರೂ, ಅವರು ಯಾವುದೇ ಉತ್ತರ ನೀಡಿಲ್ಲ.

ಹೀಗಾಗಿ, ಜೂನ್ 12ರಂದು ವಿಮಾನದಲ್ಲಿದ್ದ 240ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದ್ದ ಅಹಮದಾಬಾದ್ ವಿಮಾನ ದುರಂತದಲ್ಲಿ ಬದುಕುಳಿದಿರುವ ಏಕೈಕ ಪ್ರಯಾಣಿಕನನ್ನು ಅಪಘಾತ ಸಂಭವಿಸಿದ 48 ಗಂಟೆಗಳೊಳಗಾಗಿ ಬಂಧಿಸಲಾಗಿದೆ ಎಂಬ ವದಂತಿಗಳಿಗೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ, ಇಲ್ಲಿ ಪೋಸ್ಟ್ ಮಾಡಿರುವ ಎಲ್ಲವೂ ನಕಲಿ ಎಂಬ ವಿವರಣೆ ಹೊಂದಿರುವ ಖಾತೆಯಿಂದ ಹಂಚಿಕೆಯಾಗಿರುವ ಪೋಸ್ಟ್ ನಿಂದ ಇಂತಹ ವದಂತಿಗಳು ಸೃಷ್ಟಿಯಾಗಿವೆ ಎಂಬ ಸಂಗತಿ Reuters ಸುದ್ದಿ ಸಂಸ್ಥೆ ನಡೆಸಿದ ಆರಂಭಿಕ Fact Check ನಲ್ಲಿ ಪತ್ತೆಯಾಗಿದೆ.

ಸೌಜನ್ಯ: Reuters

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News