×
Ad

ಏರ್ ಇಂಡಿಯಾ ವಿಮಾನ ದುರಂತ | ಪ್ರಾಥಮಿಕ ವರದಿ ಸೋರಿಕೆ, ಪೈಲಟ್ ದೋಷ ಕುರಿತ ಮಾಧ್ಯಮ ನಿರೂಪಣೆ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ

Update: 2025-09-22 14:03 IST

File Photo: PTI

ಹೊಸದಿಲ್ಲಿ : ಜೂನ್ 2025ರಲ್ಲಿ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ ಕುರಿತ ಪ್ರಾಥಮಿಕ ತನಿಖಾ ವರದಿಯ ಸೋರಿಕೆ ಮತ್ತು ದುರಂತಕ್ಕೆ ಪೈಲಟ್ ದೋಷವೇ ಕಾರಣ ಎಂಬ ಮಾಧ್ಯಮ ನಿರೂಪಣೆ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿದೆ.

ಪ್ರಾಥಮಿಕ ತನಿಖಾ ವರದಿಯ ಆಯ್ದ ತುಣುಕು ಪ್ರಕಟಣೆಯು ದುರದೃಷ್ಟಕರ ಎಂದು ನ್ಯಾಯಾಲಯ ಮೌಖಿಕವಾಗಿ ಗಮನಿಸಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಸಂಪೂರ್ಣ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ನ್ಯಾಯಾಲಯ ಹೇಳಿದೆ.

ಜೂನ್ 12, 2025ರಂದು ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೆ ಏರ್‌ ಇಂಡಿಯಾ ವಿಮಾನ ಪತನಗೊಂಡಿತ್ತು. 260 ಜನರು ಮೃತಪಟ್ಟ ಈ ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ಸ್ವತಂತ್ರ, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುತ್ತಿದೆ.

ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ವಿಮಾನ ದುರಂತದ ತನಿಖೆಗಾಗಿ ಐವರು ಸದಸ್ಯರ ತಂಡವನ್ನು ರಚಿಸಲಾಗಿದೆ, ಅವರಲ್ಲಿ ಮೂವರು ಸದಸ್ಯರು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಗಳಾಗಿದ್ದಾರೆ. ಡಿಜಿಸಿಎ ಪಾತ್ರವು ಪರಿಶೀಲನೆಯಲ್ಲಿರುವುದರಿಂದ ಇದು ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ ಎಂದು ಅವರು ವಾದಿಸಿದರು.

ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನ್ಯಾಯಸಮ್ಮತ ಮತ್ತು ಪಕ್ಷಪಾತರಹಿತ ತನಿಖೆಯ ಬೇಡಿಕೆಯಲ್ಲಿ ಅರ್ಥವಿದೆ ಎಂದರೂ, ಅರ್ಜಿದಾರರು ಕೇಳಿರುವ ವಿಮಾನ ಡೇಟಾ ರೆಕಾರ್ಡರ್ (FDR) ಬಹಿರಂಗಪಡಿಸುವ ಬೇಡಿಕೆಯನ್ನು ಪ್ರಶ್ನಿಸಿದರು.

ಇದಕ್ಕೆ ಭೂಷಣ್ ಪ್ರತಿಕ್ರಿಯೆ ನೀಡುತ್ತಾ, “FDRನಲ್ಲಿ ದೋಷಗಳ ಕುರಿತಂತೆ ಪ್ರಮುಖ ಮಾಹಿತಿ ಇದೆ” ಎಂದರು. ನ್ಯಾಯಮೂರ್ತಿ ಕಾಂತ್ ಈ ವೇಳೆ “ಈ ಹಂತದಲ್ಲಿ ಇಂತಹ ಮಾಹಿತಿಯನ್ನು ಬಿಡುಗಡೆ ಮಾಡುವುದು ಸೂಕ್ತವಲ್ಲ” ಎಂದರು.

ಭೂಷಣ್ ಅವರು, ಸಂತ್ರಸ್ತ ಕುಟುಂಬಗಳು ನನ್ನನ್ನು ಸಂಪರ್ಕಿಸಿ ಪೈಲಟ್ ತಪ್ಪೆಂದು ನಿರೂಪಿಸುವ ವರದಿ ಬಗ್ಗೆ ತಿಳಿಸಿದರು ಎಂದು ಹೇಳಿದರು. ಈ ವೇಳೆ ಇದು ದುರದೃಷ್ಟಕರ. ಮಾಹಿತಿಯನ್ನು ಸೋರಿಕೆ ಮಾಡುವ ಬದಲು, ನಿಯಮಿತ ತನಿಖೆ ತಾರ್ಕಿಕ ಅಂತ್ಯಕ್ಕೆ ತಲುಪುವವರೆಗೂ ಸಂಪೂರ್ಣವಾದ ಗೌಪ್ಯತೆ ಕಾಪಾಡಬೇಕು ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News