ಅಹ್ಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ | ಮುಂದಿನ ವಾರ ಪ್ರಾಥಮಿಕ ವರದಿಯ ನಿರೀಕ್ಷೆ
PC : PTI
ಹೊಸದಿಲ್ಲಿ: ಜೂನ್ 12ರಂದು ಅಹಮದಾಬಾದ್ ನಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 242 ಮಂದಿ ಪ್ರಯಾಣಿಕರು ಸೇರಿದಂತೆ ಕನಿಷ್ಠ 270 ಮಂದಿಯನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ಜುಲೈ 11ರೊಳಗೆ ಪ್ರಾಥಮಿಕ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಅಪಘಾತಕ್ಕೆ ಕಾರಣವಾದ ಸಾಧ್ಯತೆಗಳು ಸೇರಿದಂತೆ ಅಪಘಾತದ ಕುರಿತು ಪ್ರಾಥಮಿಕ ಒಳನೋಟಗಳನ್ನು ಈ ವರದಿಯು ನೀಡಲಿರುವುದರಿಂದ, ಮಹತ್ವ ಪಡೆದುಕೊಂಡಿದೆ.
ಜೂನ್ 12ರಂದು ಟೇಕಾಫ್ ಆದ ಸುಮಾರು 30 ಸೆಕೆಂಡ್ ಗಳೊಳಗೇ ಪತನಗೊಂಡಿದ್ದ ಏರ್ ಇಂಡಿಯಾ ವಿಮಾನ ಸಂಖ್ಯೆ AI171 ದುರಂತಕ್ಕೆ ಸಂಬಂಧಿಸಿದಂತೆ ಬೋಯಿಂಗ್ ಡ್ರೀಮ್ ಲೈನರ್ 787-8, ವಿಮಾನ ಸಿಬ್ಬಂದಿಗಳು, ಅಪಘಾತಕ್ಕೀಡಾದ ವೇಳೆ ಅಹಮದಾಬಾದ್ ವಿಮಾನ ನಿಲ್ದಾಣದ ಪರಿಸ್ಥಿತಿ ಹಾಗೂ ಜೂನ್ 12ರ ಹವಾಮಾನ ವಿವರಗಳನ್ನು ಈ ವರದಿ ಒಳಗೊಂಡಿರಲಿದೆ ಎಂದು ಮೂಲಗಳು ತಿಳಿಸಿವೆ.
ಈ ವರದಿಯು ವಿಮಾನದ ಅವಶೇಷಗಳ ವಿವರಗಳು ಹಾಗೂ ತನಿಖಾ ಉಸ್ತುವಾರಿ ಅಧಿಕಾರಿಯ ಹೆಸರನ್ನೂ ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಈ ವರದಿಯು ತನಿಖಾ ಪ್ರಗತಿಯ ನೀಲನಕ್ಷೆ, ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ರೂಪುರೇಷೆ ಹಾಗೂ ತನಿಖೆಗೊಳಗಾಬೇಕಾದ ವ್ಯಾಪ್ತಿಗಳ ಕುರಿತು ಬೆಳಕು ಚೆಲ್ಲಲಿದೆ.
ಇಂಟರ್ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಷನ್ (ICAO) ಮಾರ್ಗಸೂಚಿಯ ಪ್ರಕಾರ, ಅಪಘಾತ ಸಂಭವಿಸಿದ 30 ದಿನಗಳೊಳಗಾಗಿ ಭಾರತ ತನ್ನ ಪ್ರಾಥಮಿಕ ವರದಿ ಸಲ್ಲಿಸಬೇಕಿದೆ.