×
Ad

ಸಂಸತ್ ಅಧಿವೇಶನಕ್ಕೆ ಮುನ್ನ ಸರ್ವಪಕ್ಷ ಸಭೆ: ಬಿಹಾರ ಎಸ್ಐಆರ್, ಪಹಲ್ಗಾಮ್, ಟ್ರಂಪ್ ಹೇಳಿಕೆ ಕುರಿತು ಚರ್ಚೆಗೆ ಪ್ರತಿಪಕ್ಷಗಳ ಆಗ್ರಹ

Update: 2025-07-20 21:31 IST

Photo Credit: PTI

ಹೊಸದಿಲ್ಲಿ,ಜು.20: ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ಚರ್ಚೆಗೆ ಪ್ರತಿಪಕ್ಷಗಳ ತೀವ್ರ ಒತ್ತಾಯದ ನಡುವೆ ರವಿವಾರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಸಂಸತ್ತಿನಲ್ಲಿ ‘ಆಪರೇಷನ್ ಸಿಂಧೂರ’ದಂತಹ ಪ್ರಮುಖ ವಿಷಯಗಳ ಚರ್ಚೆಗೆ ಸರಕಾರವು ಮುಕ್ತ ಮನಸ್ಸು ಹೊಂದಿದೆ ಎಂದು ಹೇಳಿದರು.

‘ಆಪರೇಷನ್ ಸಿಂಧೂರ’ದಂತಹ ವಿಷಯಗಳು ಹೆಚ್ಚಿನ ರಾಷ್ಟ್ರೀಯ ಮಹತ್ವವನ್ನು ಹೊಂದಿವೆ. ಸರಕಾರವು ಚರ್ಚೆಗಳಿಂದ ಎಂದೂ ಹಿಂದೆ ಸರಿಯುವುದಿಲ್ಲ,ಆದರೆ ಚರ್ಚೆಗಳು ನಿಯಮಗಳಿಗೆ ಅನುಗುಣವಾಗಿರಬೇಕು ಎಂದು ಸಂಸತ್ ಅಧಿವೇಶನಕ್ಕೆ ಮುನ್ನ ನಡೆದ ಸರ್ವಪಕ್ಷ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಿಜಿಜು ಹೇಳಿದರು.

ನಿಯಮಗಳು ಮತ್ತು ಪರಂಪರೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುವುದು ಎಂದು ಒತ್ತಿ ಹೇಳಿದ ಅವರು,ಸಭೆಯಲ್ಲಿ ಎತ್ತಲಾದ ವಿಷಯಗಳನ್ನು ಉಭಯ ಸದನಗಳ ಕಲಾಪ ಸಲಹಾ ಸಮಿತಿಯು ಕೈಗೆತ್ತಿಕೊಳ್ಳಲಿದೆ ಮತ್ತು ಅಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದರು.

‘ನಾವು ಎಲ್ಲ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡಿದ್ದೇವೆ. ಸಂಸತ್ತಿನ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸುವಂತೆ ನಾವು ಎಲ್ಲ ಪಕ್ಷಗಳನ್ನು ಕೋರಿಕೊಂಡಿದ್ದೇವೆ. ಸಮನ್ವಯವನ್ನು ಖಚಿತಪಡಿಸಿಕೊಳ್ಳಬೇಕಿದೆ. ಸಂಸತ್ತು ಕಾರ್ಯ ನಿರ್ವಹಿಸಲು ನೆರವಾಗುವುದು ಎಲ್ಲರ ಜವಾಬ್ದಾರಿಯಾಗಿದೆ ’ಎಂದು ಅವರು ಹೇಳಿದರು.

ಕಡಿಮೆ ಸಂಸದರನ್ನು ಹೊಂದಿರುವ ಪಕ್ಷಗಳಿಗೆ ಸಂಸತ್ತಿನಲ್ಲಿ ಮಾತನಾಡಲು ಹೆಚ್ಚಿನ ಸಮಯವನ್ನು ನೀಡಬೇಕೆಂಬ ಬೇಡಿಕೆಯನ್ನು ಸರಕಾರವು ಗಮನಕ್ಕೆ ತೆಗೆದುಕೊಂಡಿದೆ ಎಂದು ಅವರು ತಿಳಿಸಿದರು.

ಸರಕಾರವು 17 ಪ್ರಮುಖ ಮಸೂದೆಗಳನ್ನು ಮಂಡಿಸಲಿದ್ದು, ಅವುಗಳ ವಿವರಗಳನ್ನು ಶೀಘ್ರ ಒದಗಿಸಲಾಗುವುದು ಎಂದು ರಿಜಿಜು ಹೇಳಿದರು.

ಸರಕಾರವು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಬಿಹಾರದಲ್ಲಿ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ(ಎಸ್ಐಆರ್), ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಟ್ರಂಪ್ ಹೇಳಿಕೆಗಳಂತಹ ಹಲವಾರು ವಿವಾದಾತ್ಮಕ ವಿಷಯಗಳನ್ನು ಪ್ರತಿಪಕ್ಷಗಳು ಪ್ರಸ್ತಾವಿಸಿವೆ.

ಸದನದ ಸುಗಮ ಕಾರ್ಯ ನಿರ್ವಹಣೆಗಾಗಿ ಪ್ರತಿಪಕ್ಷಗಳ ಸಹಕಾರವನ್ನು ಸರಕಾರವು ಕೋರಿದ್ದರೆ,ಸಭೆಯು ತ್ವರಿತವಾಗಿ ಪಾರದರ್ಶಕತೆಗಾಗಿ ಸ್ಪಷ್ಟ ಬೇಡಿಕೆಗಳತ್ತ ತಿರುಗಿತ್ತು.

ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮದಲ್ಲಿ ಮಧ್ಯಸ್ಥಿಕೆ ವಹಿಸಿದ್ದಾಗಿ ಟ್ರಂಪ್ ಅವರ ಪುನರಪಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಂದ ಉತ್ತರಗಳಿಗಾಗಿ ಪ್ರತಿಪಕ್ಷಗಳು ಆಗ್ರಹಿಸಿವೆಯಾದರೂ,ಮೋದಿ ಈ ವಿಷಯಗಳ ಕುರಿತು ಸಂಸತ್ತಿನಲ್ಲಿ ಪ್ರತಿಕ್ರಿಯಿಸುವ ಸಾಧ್ಯತೆಗಳು ಕಡಿಮೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಪಹಲ್ಗಾಮ್ ದಾಳಿ ಮತ್ತು ಇತರ ವಿಷಯಗಳ ಕುರಿತು ಪ್ರಧಾನಿ ಮೋದಿಯವರು ಹೇಳಿಕೆ ನೀಡಬೇಕೆಂಬ ಪ್ರತಿಪಕ್ಷಗಳ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ರಿಜಿಜು,‘ಪ್ರಧಾನಿಯವರು ವಿದೇಶ ಪ್ರವಾಸದ ಸಂದರ್ಭಗಳನ್ನು ಹೊರತುಪಡಿಸಿ ಸಂಸತ್ತಿನಲ್ಲಿ ಉಪಸ್ಥಿತರಿರುತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ಪ್ರಧಾನಿಯವರು ಯಾವಾಗಲೂ ಸಂಸತ್ತಿನಲ್ಲಿ ಉಪಸ್ಥಿತರಿರುತ್ತಾರೆ. ಆದರೆ ಪ್ರಧಾನಿಯವರು ಎಲ್ಲ ಸಮಯದಲ್ಲಿಯೂ ಸದನದಲ್ಲಿ ಇರುವುದಿಲ್ಲ ’ ಎಂದು ಹೇಳಿದರು.

ಸಂಸತ್ತಿನ ಕಲಾಪಗಳು ನಡೆಯುತ್ತಿರುವಾಗಲೆಲ್ಲ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸ್ಪಂದಿಸಲು ಸಂಪುಟ ಸಚಿವರು ಉಪಸ್ಥಿತರಿರುತ್ತಾರೆ ಎಂದರು.

ಕೇಂದ್ರ ಸಚಿವ ಹಾಗೂ ರಾಜ್ಯಸಭೆಯಲ್ಲಿ ಸದನ ನಾಯಕ ಜೆ.ಪಿ.ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ರಿಜಿಜು ಮತ್ತು ಸಹಾಯಕ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಸರಕಾರವನ್ನು ಪ್ರತಿನಿಧಿಸಿದ್ದರು.

ಜೈರಾಮ ರಮೇಶ್ (ಕಾಂಗ್ರೆಸ್),ಸುಪ್ರಿಯಾ ಸುಲೆ (ಎನ್ಸಿಪಿ-ಶರದ್ ಪವಾರ್),ಟಿ.ಆರ್.ಬಾಲು(ಡಿಎಂಕೆ) ಮತ್ತು ರಾಮದಾಸ್ ಆಠವಳೆ(ಆರ್ಪಿಐ-ಎ) ಸೇರಿದಂತೆ ಹಲವಾರು ಪ್ರತಿಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪಹಲ್ಗಾಮ್ ದಾಳಿಗೆ ಕಾರಣರಾದವರನ್ನು ನ್ಯಾಯದ ಕಟಕಟೆಗೆ ತರುವಲ್ಲಿ ವೈಫಲ್ಯ, ಬಿಹಾರದಲ್ಲಿ ಎಸ್ಐಆರ್ ಮತದಾರರ ಹಕ್ಕುಗಳನ್ನು ಕಿತ್ತುಕೊಳ್ಳುವ ಸಾಧ್ಯತೆ ಕುರಿತು ಕಳವಳಗಳು ಮತ್ತು ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳು ಸೇರಿದಂತೆ ವಿಷಯಗಳನ್ನು ತಾವು ಸಂಸತ್ತಿನಲ್ಲಿ ಪ್ರಮುಖವಾಗಿ ಎತ್ತುವುದಾಗಿ ಪ್ರತಿಪಕ್ಷ ನಾಯಕರು ಹೇಳಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನವು ಜು.21ರಿಂದ ಆ.21ರವರೆಗೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News