×
Ad

ಭಾರತದಿಂದ ರಫ್ತಾಗಿದ್ದ ಮಾವಿನಹಣ್ಣುಗಳನ್ನು ತಿರಸ್ಕರಿಸಿದ ಅಮೆರಿಕ!

Update: 2025-05-19 17:30 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ಭಾರತದಿಂದ ಅಮೆರಿಕಕ್ಕೆ ರಫ್ತಾಗಿದ್ದ ಮಾವಿನ ಹಣ್ಣುಗಳನ್ನು ಅಲ್ಲಿಯ ಅಧಿಕಾರಿಗಳು ಅಸಮರ್ಪಕ ದಾಖಲೆಗಳ ಕಾರಣದಿಂದ ಲಾಸ್ ಏಂಜೆಲಿಸ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಅಟ್ಲಾಂಟಾ ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಲ್ಲಿಯೇ ತಿರಸ್ಕರಿಸಿದ್ದಾರೆ.

ರಫ್ತುದಾರರಿಗೆ ಅವುಗಳನ್ನು ಅಮೆರಿಕದಲ್ಲಿಯೇ ನಾಶಗೊಳಿಸುವುದು ಅಥವಾ ಭಾರತಕ್ಕೆ ವಾಪಸ್ ರವಾನಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿರಲಿಲ್ಲ. ಮಾವಿನ ಹಣ್ಣು ಬೇಗನೇ ಹಾಳಾಗುವುದರಿಂದ ಮತ್ತು ಭಾರತಕ್ಕೆ ವಾಪಸ್ ರವಾನಿಸಲು ಗಣನೀಯ ವೆಚ್ಚವಾಗುವುದರಿಂದ ಅವುಗಳನ್ನು ಅಲ್ಲಿಯೇ ನಾಶಗೊಳಿಸಲು ರಫ್ತುದಾರರು ನಿರ್ಧರಿಸಿದ್ದು,ಇದರಿಂದ ಐದು ಲಕ್ಷ ಡಾಲರ್(ಸುಮಾರು 4.27 ಕೋಟಿ ರೂ.) ಗಳ ನಷ್ಟವನ್ನು ಅಂದಾಜಿಸಲಾಗಿದೆ.

ಅಮೆರಿಕಕ್ಕೆ ರಫ್ತಾಗುವ ಮಾವಿನಹಣ್ಣುಗಳನ್ನು ಕೀಟ ಮುಕ್ತಗೊಳಿಸಲು ಮತ್ತು ಹೆಚ್ಚು ಅವಧಿಗೆ ಬಾಳಿಕೆ ಬರುವಂತಾಗಲು ಅವುಗಳನ್ನು ನವಿಮುಂಬೈನಲ್ಲಿಯ ನಿಯೋಜಿತ ಘಟಕದಲ್ಲಿ ನಿಯಂತ್ರಿತ ವಿಕಿರಣ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಅಮೆರಿಕದ ಕೃಷಿ ಇಲಾಖೆಯ ಪ್ರತಿನಿಧಿಯೋರ್ವರು ಈ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾರೆ. ಅಮೆರಿಕಕ್ಕೆ ರಫ್ತು ಮಾಡಲು ಯೋಗ್ಯವಾಗಿವೆ ಎಂಬ ಪ್ರಮಾಣ ಪತ್ರ(ಪಿಪಿಕ್ಯೂ203 ಫಾರ್ಮ್)ವನ್ನು ಅವರೇ ನೀಡುತ್ತಾರೆ. ಮೇ 8 ಮತ್ತು 9ರಂದು ಅಮೆರಿಕದ ಅಧಿಕಾರಿಯ ಉಪಸ್ಥಿತಿಯಲ್ಲಿ ಈ ಪ್ರಕ್ರಿಯೆ ನಡೆದಿತ್ತು.

ಆದರೆ ಅಮೆರಿಕದ ಅಧಿಕಾರಿಗಳು ಈ ದಾಖಲೆಗಳ ಬಗ್ಗೆಯೇ ತಕರಾರು ಎತ್ತಿದ್ದಾರೆ. ಅವರು ಪರಿಶೀಲಿಸಿದಾಗ ದಾಖಲೆಗಳು ದೋಷಪೂರ್ಣವಾಗಿರುವುದು ಕಂಡು ಬಂದಿದೆ. ಮಾವಿನ ಹಣ್ಣುಗಳಲ್ಲಿ ಯಾವುದೇ ಕೀಟಗಳಿಲ್ಲ,ದೋಷವಿರುವುದು ಪ್ರಮಾಣ ಪತ್ರದಲ್ಲಿ. ಪ್ರಮಾಣ ಪತ್ರಗಳನ್ನು ವಿತರಿಸುವ ಅಮೆರಿಕದ ಅಧಿಕಾರಿಯಿಂದಾಗಿ ನಾವು ನಷ್ಟ ಅನುಭವಿಸುವಂತಾಗಿದೆ ಎಂದು ರಫ್ತುದಾರರು ಗೋಳು ತೋಡಿಕೊಂಡಿದ್ದಾರೆ.

ಅಮೆರಿಕವು ಭಾರತದಿಂದ ಮಾವಿನ ಹಣ್ಣುಗಳು ರಫ್ತಾಗುವ ಪ್ರಮುಖ ದೇಶವಾಗಿದೆ. ಇಂತಹ ಘಟನೆಗಳು ವ್ಯಾಪಾರದ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತವೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News