ಎಲ್ಲ ಪ್ರಯಾಣಿಕ ವರ್ಗಗಳಿಗಾಗಿ ʼಅಮೃತ್ ಭಾರತ್ 3.0ʼ ರೈಲುಗಳನ್ನು ತಯಾರಿಸಲಿರುವ ಭಾರತೀಯ ರೈಲ್ವೆ
ಅಮೃತ್ ಭಾರತ್ 3.0 | PC : X
ಹೊಸದಿಲ್ಲಿ: ರೈಲ್ವೆ ಸಚಿವಾಲಯವು ʼಅಮೃತ್ ಭಾರತ್ 3.0ʼ ರೈಲುಗಳನ್ನು ತಯಾರಿಸಲು ಯೋಜಿಸಿದೆ. ಈ ರೈಲುಗಳನ್ನು ʼಅಮೃತ್ ಭಾರತ್ 1.0ʼ ಮತ್ತು ʼಅಮೃತ್ ಭಾರತ್ 2.0ʼ ರೈಲುಗಳ ಅನುಭವವನ್ನು ಆಧರಿಸಿ ವಿನ್ಯಾಸಗೊಳಿಸಲಾಗುವುದು. ಕಡಿಮೆ ಆದಾಯ ಮತ್ತು ಕೆಳ ಮಧ್ಯಮ ಆದಾಯ ವರ್ಗಗಳಿಗೆ ಕೈಗೆಟಕುವ ದರಗಳಲ್ಲಿ ಸೇವೆ ಮತ್ತು ಉತ್ತಮ ಗುಣಮಟ್ಟದ ಪ್ರಯಾಣ ಅನುಭವವನ್ನು ಒದಗಿಸುವ ಉದ್ದೇಶದಿಂದ 2023ರಲ್ಲಿ ಅಮೃತ ಭಾರತ ರೈಲುಗಳನ್ನು ಆರಂಭಿಸಲಾಗಿತ್ತು.
ಪ್ರಸ್ತುತ ದೇಶಾದ್ಯಂತ ಒಟ್ಟು ಎಂಟು ಅಮೃತ ಭಾರತ ರೈಲುಗಳು ಸಂಚರಿಸುತ್ತಿವೆ.
ಈಗ ʼಅಮೃತ್ ಭಾರತ್ 3.0ʼ ರೈಲುಗಳನ್ನು ತಯಾರಿಸಲು ಭಾರತೀಯ ರೈಲ್ವೆಯು ಸಜ್ಜಾಗಿದೆ. ಚೆನ್ನೈನ ಇಂಟಿಗ್ರಲ್ ಕೋಚ್ (ಐಸಿಎಫ್) ಫ್ಯಾಕ್ಟರಿಯು ಈ ಆಧುನಿಕ ರೈಲುಗಳನ್ನು ಅಭಿವೃದ್ಧಿಗೊಳಿಸಲಿದೆ.
ಅಮೃತ್ ಭಾರತ್ 3.0 ರೈಲುಗಳು ಸಮತೋಲಿತ ಸೌಲಭ್ಯ ಮತ್ತು ಕೈಗೆಟಕುವ ದರಗಳಲ್ಲಿ ಉತ್ತಮ ಪ್ರಯಾಣವನ್ನು ಒದಗಿಸಲು ಹವಾನಿಯಂತ್ರಿತ (ಎಸಿ) ಮತ್ತು ನಾನ್-ಎಸಿ ಬೋಗಿಗಳ ಸಂಯೋಜನೆಯನ್ನು ಹೊಂದಿರಲಿವೆ ಎಂದು ಐಸಿಎಫ್ ಜನರಲ್ ಮ್ಯಾನೇಜರ್ ಯು.ಸುಬ್ಬರಾವ್ ಅವರು ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ತಿಳಿಸಿದರು.
ಅಮೃತ ಭಾರತ ರೈಲುಗಳು ಜನರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಮಗ್ರ ಸೇವೆಗಳನ್ನು ಒದಗಿಸುತ್ತವೆ. ಅಮೃತ್ ಭಾರತ್ 2.0 ರೈಲುಗಳಲ್ಲಿ ರೈಲ್ವೆ ಇಲಾಖೆಯು ಸೆಮಿ-ಆಟೋಮ್ಯಾಟಿಕ್ ಕಪ್ಲರ್‌ಗಳು,ಮಾಡ್ಯೂಲರ್ ಟಾಯ್ಲೆಟ್‌ಗಳು,ನೂತನ ವಿನ್ಯಾಸದ ಆಸನಗಳು ಮತ್ತು ಬರ್ತ್‌ಗಳು ಸೇರಿದಂತೆ 12 ಪ್ರಮುಖ ಸುಧಾರಣೆಗಳನ್ನು ಮಾಡಿತ್ತು.
ನಾನ್-ಎಸಿ ಅಮೃತ್ ಭಾರತ್ ರೈಲುಗಳು 11 ಜನರಲ್,ಎಂಟು ಸ್ಲೀಪರ್ ಕ್ಲಾಸ್ ಬೋಗಿಗಳೊಂದಿಗೆ ಒಂದು ಪ್ಯಾಂಟ್ರಿ ಕಾರ್ ಮತ್ತು ಎರಡು ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಕಮ್ ಗಾರ್ಡ್ ವ್ಯಾನ್ ಹಾಗೂ ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿವೆ. ರೈಲ್ವೆಯು 100 ಅಮೃತ ಭಾರತ ರೈಲುಗಳ ಉತ್ಪಾದನೆಗೆ ಅವಕಾಶ ಕಲ್ಪಿಸಿದೆ.