×
Ad

ಆಂಧ್ರಪ್ರದೇಶ: ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ ಕಸ ಗುಡಿಸುವಾಕೆ!

Update: 2025-06-15 08:00 IST

ಅಮರಾವತಿ: ಹೆರಿಗೆಗಾಗಿ ಆಸ್ಪತ್ರೆಗೆ  ದಾಖಲಾಗಿದ್ದ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಯ ಕಸ ಗುಡಿಸುವಾಕೆ ಹೆರಿಗೆ ಮಾಡಿಸಿದ ಸ್ವಾರಸ್ಯಕರ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ತಲ್ಲರೇವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಹೆರಿಗೆ ಬಳಿಕ ಶಿಶು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಆಪಾದಿಸಿ ಮಹಿಳೆಯ ಕುಟುಂಬ ಸದಸ್ಯರು ಮತ್ತು ಬಂಧುಗಳು ಪ್ರತಿಭಟನೆ ನಡೆಸಿದರು.

ಆದರೆ ಈ ಆರೋಪವನ್ನು ವೈದ್ಯಕೀಯ ಅಧಿಕಾರಿಗಳು ಅಲ್ಲಗಳೆದಿದ್ದು, ನೈರ್ಮಲ್ಯ ಕಾರ್ಮಿಕ ಮಹಿಳೆ ಹೆರಿಗೆ ಮಾಡಿಸಿಲ್ಲ ಎಂದು ವಾದಿಸಿದ್ದಾರೆ. ನವಜಾತ ಶಿಶುವಿನ ಸಾವಿಗೆ ಸಂಬಂಧಿಸಿದಂತೆ ಯಾರೇ ನಿರ್ಲಕ್ಷ್ಯ ವಹಿಸಿದ್ದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ಘಟನೆ ತಲ್ಲರೇವು ಪ್ರದೇಶದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ. ಶುಕ್ರವಾರ ಮುಂಜಾನೆ 22 ವರ್ಷದ ಮಹಿಳೆ ಹೆರಿಗೆಗಾಗಿ ದಾಖಲಾಗಿದ್ದಳು. ಆಕೆಯ ಮೇಲೆ ನಿರಂತರ ನಿಗಾ ವಹಿಸಲಾಗಿತ್ತು. ಶನಿವಾರ ಮುಂಜಾನೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಾಗ ಕರ್ತವ್ಯದಲ್ಲಿದ್ದ ಗುಡಿಸುವಾಕೆ ಹೆರಿಗೆ ಮಾಡಿಸಿದಳು ಎಂದು ಸಂಬಂಧಿಕರು ಹೇಳಿದ್ದಾರೆ.

ಭ್ರೂಣದಲ್ಲಿದ್ದ ಕಲ್ಮಶ ಮತ್ತು ಸ್ರಾವ ಶ್ವಾಸಕೋಶದಲ್ಲಿ ಸಿಕ್ಕಿಕೊಂಡ ಕಾರಣದಿಂದ ಮೆಕೊನಿಯಮ್ ಆಸ್ಪಿರೇಶನ್ ಸಿಂಡ್ರೋಮ್ ಎಂಬ ಉಸಿರಾಟದ ತೊಂದರೆಯಿಂದ ನವಜಾತ ಶಿಶು ಮೃತಪಟ್ಟಿದೆ ಎನ್ನುವುದು ವೈದ್ಯರ ಅಭಿಮತ. ಮಗುವಿನ ಆರೋಗ್ಯಸ್ಥಿತಿ ವಿಷಮಿಸಿದಾಗ ಕರ್ತವ್ಯದಲ್ಲಿದ್ದ ವೈದ್ಯರು, ಮಗುವನ್ನು ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದೊಯ್ಯವಂತೆ ಸೂಚಿಸಿದ್ದರು ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಆಸ್ಪತ್ರೆಗೆ ಕರೆದೊಯ್ಯವ ಮಾರ್ಗಮಧ್ಯೆ ಶಿಶು ಕೊನೆಯುಸಿರೆಳೆದಿದೆ. ನಸುಕಿನ 2 ಗಂಟೆಯ ವರೆಗೆ ಪ್ರಸೂತಿ ತಜ್ಞರು ಮತ್ತು ನೈರ್ಮಲ್ಯ ಸಿಬ್ಬಂದಿ ಆಸ್ಪತ್ರೆಯಲ್ಲಿದ್ದರು ಎಂದು ಜಿಲ್ಲಾ ಸಮನ್ವಯಾಧಿಕಾರಿ ಡಾ.ಸ್ವಪ್ನ ಹೇಳಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ಮಕ್ಕಳ ತಜ್ಞರು, ಇಬ್ಬರು ನರ್ಸ್ ಗಳು ಮತ್ತು ನೈರ್ಮಲ್ಯ ಸಹಾಯಕರು ಇದ್ದರು. ನೈರ್ಮಲ್ಯ ಕಾರ್ಮಿಕೆಗೆ ಹೆರಿಗೆ ಸಹಾಯಕಿಯಾಗಿ ತರಬೇತಿಯಾಗಿದ್ದು, ದಿಢೀರನೇ ಪ್ರಸವವಾದಾಗ ಮಗುವನ್ನು ಆಕೆ ಹಿಡಿದುಕೊಂಡಿದ್ದಾಳೆ. ಆಗ ಹೊಕ್ಕುಳಬಳ್ಳಿ ತೀರಾ ಉದ್ದವಾಗಿದ್ದರಿಂದ ಕತ್ತರಿಸಿ ಮಗುವಿಗೆ ಆಮ್ಲಜನಕದ ನೆರವು ನೀಡಿದಳು. ಬಳಿಕ ನರ್ಸ್ ಹಾಗೂ ವೈದ್ಯರನ್ನು ಕರೆದಿದ್ದಾಗಿ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News