×
Ad

ಉತ್ತರ ಪ್ರದೇಶ | ದೈಹಿಕ ಶಿಕ್ಷೆ ನೀಡಿದ್ದಕ್ಕೆ ಪ್ರತೀಕಾರವಾಗಿ ಶಿಕ್ಷಕರೊಬ್ಬರ ಗರ್ಭಿಣಿ ಪತ್ನಿ, ಇಬ್ಬರು ಪುತ್ರಿಯನ್ನು ಹತ್ಯೆಗೈದ ಅಪ್ರಾಪ್ತ ಬಾಲಕರು!

Update: 2025-10-12 20:05 IST

ಲಕ್ನೊ: ತಮಗೆ ದೈಹಿಕ ಶಿಕ್ಷೆ ನೀಡಿದ್ದರಿಂದ ಕುಪಿತಗೊಂಡ ಇಬ್ಬರು ಅಪ್ರಾಪ್ತ ಬಾಲಕರು, ತಮ್ಮ ಶಿಕ್ಷಕನ ಪತ್ನಿ ಹಾಗೂ ಅವರ ಇಬ್ಬರು ಪುತ್ರಿಯರನ್ನು ಕೊಚ್ಚಿ ಹತ್ಯೆಗೈದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಾಘ್ಪತ್ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಶಿಕ್ಷಕ ಮುಫ್ತಿ ಇಬ್ರಾಹಿಂ ಅವರ ಪತ್ನಿ ಇಸ್ರಾನಾ ಹಾಗೂ ಇಬ್ಬರು ಪುತ್ರಿಯರಾದ ಸೋಫಿಯಾ (5) ಮತ್ತು ಸುಮೈಯಾ (2) ಎಂದು ಗುರುತಿಸಲಾಗಿದೆ. ಮೃತ ಇಸ್ರಾನಾ ಐದು ತಿಂಗಳ ಗರ್ಭಿಣಿಯಾಗಿದ್ದರು ಎಂದು ವರದಿಯಾಗಿದೆ.

ಇಬ್ರಾಹಿಂ ಮುಫ್ತಿ ಧಾರ್ಮಿಕ ಶಿಕ್ಷಕರಾಗಿದ್ದು, ಸ್ಥಳೀಯ ಮಕ್ಕಳಿಗೆ ಪಾಠ ಮಾಡುತ್ತಿದ್ದರು ಎನ್ನಲಾಗಿದೆ. ಈ ಮಕ್ಕಳ ಪೈಕಿ ಅದೇ ಪ್ರದೇಶದ ನಿವಾಸಿಗಳಾದ ಆರೋಪಿ ಬಾಲಕರೂ ಅವರ ವಿದ್ಯಾರ್ಥಿಗಳಾಗಿದ್ದು, ಅವರ ತರಗತಿಗಳಿಗೆ ಹಾಜರಾಗುತ್ತಿದ್ದರು ಎಂದು ಹೇಳಲಾಗಿದೆ.

ಶಿಕ್ಷಕ ಇಬ್ರಾಹಿಂ ಮುಫ್ತಿ ಪದೇ ಪದೇ ಕೋಲಿನಿಂದ ಮಕ್ಕಳನ್ನು ಶಿಕ್ಷಿಸುತ್ತಿದ್ದರು ಎನ್ನಲಾಗಿದ್ದು, ಈ ಬಗ್ಗೆ ಆರೋಪಿ ಬಾಲಕರಿಗೆ ಅಸಮಾಧಾನವಿತ್ತು ಎನ್ನಲಾಗಿದೆ. ಹೀಗಾಗಿ, ಆರೋಪಿ ಬಾಲಕರು ಇಬ್ರಾಹಿಂ ಮುಫ್ತಿಯವರ ಬಾಡಿಗೆ ಮನೆಗೆ ನುಗ್ಗಿ, ಅವರ ಪತ್ನಿ ಇಸ್ರಾನಾ ಮೇಲೆ ಚಾಕು ಮತ್ತು ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಬಳಿಕ ಅವರ ಇಬ್ಬರು ಪುತ್ರಿಯರನ್ನೂ ಬಾಲಕರು ಹತ್ಯೆಗೈದಿದ್ದಾರೆ. ಈ ಘಟನೆಯ ವೇಳೆ ಇಬ್ರಾಹಿಂ ಮುಫ್ತಿ ಮನೆಯಿಂದ ಹೊರಗೆ ತೆರಳಿದ್ದರು ಎಂದು ಹೇಳಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿ ಬಾಲಕರನ್ನು ಬಂಧಿಸಿದ್ದು, ಅವರಿಂದ ಹತ್ಯೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬಾಘ್ಪಟ್ ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News