ಅರುಣಾಚಲ ಪ್ರದೇಶ: ಶಾಲೆಯಲ್ಲಿ ಬೆಂಕಿ ಅವಘಡ, 8ರ ಹರೆಯದ ವಿದ್ಯಾರ್ಥಿ ಸಜೀವ ದಹನ
Update: 2025-08-24 21:22 IST
ಸಾಂದರ್ಭಿಕ ಚಿತ್ರ
ಗುವಾಹಟಿ,ಆ.24: ಅರುಣಾಚಲ ಪ್ರದೇಶದ ಶಿ-ಯೋಮಿ ಜಿಲ್ಲೆಯ ಶಾಲೆಯೊಂದರಲ್ಲಿ ರವಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಎಂಟರ ಹರೆಯದ ಮೂರನೇ ತರಗತಿಯ ವಿದ್ಯಾರ್ಥಿ ಸಜೀವ ದಹನಗೊಂಡಿದ್ದು, ಇತರ ಮೂವರು ಗಾಯಗೊಂಡಿದ್ದಾರೆ.
ಬೆಳಗಿನ ಜಾವ ಪಾಪಿಕ್ರಾಂಗ್ ಸರಕಾರಿ ಸನಿವಾಸ ಶಾಲೆಯ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಕಟ್ಟಡ ಸಂಪೂರ್ಣವಾಗಿ ಹಾನಿಗೀಡಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು.
ಗಾಯಗೊಂಡ ವಿದ್ಯಾರ್ಥಿಗಳು 8ರಿಂದ 11 ವರ್ಷ ವಯೋಮಾನದವರಾಗಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಆಘಾತವನ್ನು ವ್ಯಕ್ತಪಡಿಸಿರುವ ರಾಜ್ಯದ ಶಿಕ್ಷಣ ಸಚಿವ ಪಸಾಂಗ್ ದೋರ್ಜಿ ಸೋನಾ ಅವರು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದ್ದು,ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.