×
Ad

ಅರುಣಾಚಲ ಪ್ರದೇಶ | ಪ್ರಧಾನಿಯಿಂದ 5,125 ಕೋಟಿ ರೂ. ವೆಚ್ಚದ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ

Update: 2025-09-22 21:28 IST

 ನರೇಂದ್ರ ಮೋದಿ | PC : PTI 

ಇಟಾನಗರ,ಸೆ.22: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಅರುಣಾಚಲ ಪ್ರದೇಶದಲ್ಲಿ 5,125.37 ಕೋ.ರೂ.ವೆಚ್ಚದಲ್ಲಿ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು.

ಇಲ್ಲಿಯ ಇಂದಿರಾ ಗಾಂಧಿ ಪಾರ್ಕ್‌ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೋದಿ ಅವರು ಶಿಯೋಮಿ ಜಿಲ್ಲೆಯಲ್ಲಿ ಎರಡು ಪ್ರಮುಖ ಜಲವಿದ್ಯುತ್ ಯೋಜನೆಗಳು ಮತ್ತು ತವಾಂಗ್‌ ನಲ್ಲಿ ಸಮ್ಮೇಳನ ಸಭಾಂಗಣಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿದರು.

186 ಮೆಗಾವ್ಯಾಟ್ ಸಾಮರ್ಥ್ಯದ ಟಾಟೊ-ಐ ಯೋಜನೆಯನ್ನು 1,750 ಕೋ.ರೂ.ವೆಚ್ಚದಲ್ಲಿ ಅರುಣಾಚಲ ಪ್ರದೇಶ ಸರಕಾರ ಮತ್ತು ಈಶಾನ್ಯ ವಿದ್ಯುಚ್ಛಕ್ತಿ ನಿಗಮ ಲಿ.(ನೀಪ್ಕೊ) ಜಂಟಿಯಾಗಿ ನಿರ್ಮಿಸಲಿದ್ದು, ಇದು ವಾರ್ಷಿಕ ಸುಮಾರು 802 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ.

240 ಮೆಗಾವ್ಯಾಟ್ ಸಾಮಥ್ಯದ ಹಿಯೊ ಯೋಜನೆಯನ್ನು 1,939 ಕೋ.ರೂ.ಗಳಲ್ಲಿ ರಾಜ್ಯ ಸರಕಾರ ಮತ್ತು ನೀಪ್ಕೊ ಜಂಟಿಯಾಗಿ ನಿರ್ಮಿಸಲಿದ್ದು,ಇದು ವಾರ್ಷಿಕ 1,000 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ.

ಯಾರ್ಜೆಪ್ ನದಿ ನೀರನ್ನು ಬಳಸಿಕೊಂಡು ನಿರ್ಮಾಣಗೊಳ್ಳುವ ಇವೆರಡೂ ಯೋಜನೆಗಳು ಅರುಣಾಚಲ ಪ್ರದೇಶದ ಜಲವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಮುಖ ಪ್ರಯತ್ನದ ಭಾಗವಾಗಿದ್ದು, ಪ್ರಾದೇಶಿಕ ಇಂಧನ ಭದ್ರತೆಗೆ ಗಮನಾರ್ಹ ಕೊಡುಗೆಯನ್ನು ನೀಡಲಿವೆ.

PM-DevINE ಯೋಜನೆಯಡಿ ತವಾಂಗ್‌ನಲ್ಲಿ 145.37 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಮ್ಮೇಳನ ಸಭಾಂಗಣಕ್ಕೂ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದು, ಇದು 1,500ಕ್ಕೂ ಅಧಿಕ ಜನರಿಗೆ ಸ್ಥಳಾವಕಾಶದ ಜೊತೆಗೆ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿರಲಿದೆ ಹಾಗೂ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿಯನ್ನು ಬೆಂಬಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಂಪರ್ಕ, ಆರೋಗ್ಯ ಮತ್ತು ಅಗ್ನಿ ಸುರಕ್ಷತೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಪೂರಕವಾಗಿ 1,290 ಕೋ.ರೂ.ಗೂ ಹೆಚ್ಚಿನ ವೆಚ್ಚದ ಹಲವಾರು ಇತರ ಮೂಲಸೌಕರ್ಯ ಯೋಜನೆಗಳಿಗೂ ಪ್ರಧಾನಿ ಚಾಲನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News