×
Ad

ಅರುಣಾಚಲಪ್ರದೇಶ ಸರಕಾರದಿಂದಲೂ ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ ಗೆ ನಿಷೇಧ

Update: 2025-10-08 20:46 IST

 ಸಾಂದರ್ಭಿಕ ಚಿತ್ರ

ಇಟಾನಗರ್, ಅ. 8: ಅರುಣಾಚಲಪ್ರದೇಶ ಸರಕಾರ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಾರಾಟ ಹಾಗೂ ಬಳಕೆಗೆ ನಿಷೇಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ 20 ಮಕ್ಕಳು ಸಾವನ್ನಪ್ಪಿದ ಬಳಿಕ ಅರುಣಾಚಲಪ್ರದೇಶ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಸ್ರೇಸನ್ ಔಷಧ ಕಂಪೆನಿ ಉತ್ಪಾದಿಸುವ ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ ನ ಮಾರಾಟ, ವಿತರಣೆ ಹಾಗೂ ದಾಸ್ತಾನು ನಿಷೇಧಿಸಿ ಅರುಣಾಚಲಪ್ರದೇಶದ ಔಷಧ ನಿಯಂತ್ರಣ ಇಲಾಖೆ ಈ ಆದೇಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಇತರ ರಾಜ್ಯಗಳಲ್ಲಿ ಮಕ್ಕಳ ಸಾವು ಹಾಗೂ ಕೆಮ್ಮಿನ ಸಿರಪ್‌ ನ ನಡುವೆ ಸಂಬಂಧವಿದೆ ಎಂದು ವರದಿಯಾದ ಹಾಗೂ ಭಾರತ ಸರಕಾರದ ಆರೋಗ್ಯ ಸೇವೆಗಳ ಮಹಾ ನಿರ್ದೇಶಕರು ಮಕ್ಕಳಲ್ಲಿ ಕೆಮ್ಮಿನ ಸಿರಪ್‌ ನ ಸುರಕ್ಷಿತ ಬಳಕೆಗೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ ಎಂದು ಅರುಣಾಚಲಪ್ರದೇಶದ ಔಷಧ ನಿಯಂತ್ರಕ ಡಾ. ಕೊಮ್ಲಿಂಗ್ ಪೆರ್ಮೆ ತಿಳಿಸಿದ್ದಾರೆ.

ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಖರೀದಿಸಬಾರದು, ಮಾರಾಟ ಮಾಡಬಾರದು ಅಥವಾ ಸಾರ್ವಜನಿಕ ಬಳಕೆಗೆ ದಾಸ್ತಾನು ಮಾಡಬಾರದು ಎಂದು ಆರೋಗ್ಯ ಇಲಾಖೆ ದಾಸ್ತಾನುಗಾರರು/ಚಿಲ್ಲರೆ ವ್ಯಾಪಾರಸ್ಥರಿಗೆ ನಿರ್ದೇಶಿಸಿದೆ.

ದಾಸ್ತಾನುಗಾರರು/ಚಿಲ್ಲರೆ ವ್ಯಾಪಾರಿಗಳು ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಹೊಂದಿದ್ದರೆ, ಕೂಡಲೇ ಸ್ಥಳೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ವರದಿ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳಿಗೆ ಕೆಮ್ಮಿನ ಸಿರಪ್ ಶಿಫಾರಸು ಮಾಡುವಾಗ ಎಚ್ಚರಿಕೆ ವಹಿಸುವಂತೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಕೂಡ ಸಲಹೆಯಲ್ಲಿ ಹೇಳಲಾಗಿದೆ.

ಈ ನಡುವೆ ಇಲಾಖೆ ಕೆಮ್ಮಿನ ಸಿರಪ್ ಸೇವಿಸದಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News