ಅಸ್ಸಾಂ | ಬಂಗಾಳಿ ಕಾರ್ಮಿಕರ ಮೇಲೆ ಹಲ್ಲೆ, ಬಿಜೆಪಿ ನಾಯಕನ ವಿರುದ್ಧ ಎಫ್‌ಐಆರ್
ಸಾಂದರ್ಭಿಕ ಚಿತ್ರ
ಗುವಾಹಟಿ : ಬಂಗಾಳಿ ಮೂಲದ ಮುಸ್ಲಿಮ್ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಮತ್ತು ಬೆದರಿಕೆಯೊಡ್ಡಿದ ಆರೋಪದಲ್ಲಿ ಪೂರ್ವ ಅಸ್ಸಾಮಿನ ಚರಾಯಿದೇವ್ ಜಿಲ್ಲೆಯ ಬಿಜೆಪಿ ನಾಯಕನೋರ್ವನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಹಲವಾರು ಅಸ್ಸಾಮಿ ರಾಷ್ಟ್ರವಾದಿ ಗುಂಪುಗಳು ಅಪ್ಪರ್ ಅಸ್ಸಾಂ ಪ್ರದೇಶವನ್ನು ತೊರೆಯುವಂತೆ ಮಿಯಾ ಮುಸ್ಲಿಮರಿಗೆ ತಾಕೀತು ಮಾಡಿದ ಬಳಿಕ ಬಿಜೆಪಿ ನಾಯಕ ಮಯೂರ ಬೊರ್ಗೊಹೈನ್ ಸಹಚರರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಒಂಭತ್ತು ಕಾರ್ಮಿಕರು ದೂರಿನಲ್ಲಿ ಆರೋಪಿಸಿದ್ದಾರೆ.
ಬಂಗಾಳಿ ಮೂಲದ ಮುಸ್ಲಿಮರನ್ನು ‘ಮಿಯಾ ಮುಸ್ಲಿಮರು’ ಎಂದು ಕರೆಯಲಾಗುತ್ತಿದ್ದು,ಅಕ್ರಮ ವಲಸಿಗರು ಎಂಬ ಸುಳ್ಳು ಆರೋಪವನ್ನು ಅವರು ಹೊತ್ತಿದ್ದಾರೆ.
ಪಶ್ಚಿಮ ಅಸ್ಸಾಮಿನ ಬಾರ್ಪೇಟಾ ಜಿಲ್ಲೆಯ ನಿವಾಸಿಗಳಾದ ಈ ಕಾರ್ಮಿಕರು ಕಳೆದ ಮೂರು ವರ್ಷಗಳಿಂದ ಚರಾಯಿದೇವ್‌ನಲ್ಲಿ ಮೂರು ಅಂತಸ್ತುಗಳ ಕೌಶಲ್ಯಾಭಿವೃದ್ಧಿ ಕಟ್ಟಡದ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು. ಕಟ್ಟಡವನ್ನು ಬೊರ್ಗೊಹೈನ್ ನಿರ್ಮಿಸುತ್ತಿದ್ದಾರೆ.
‘ನಮ್ಮ ಕೆಲಸದ ಬಾಬ್ತು 15 ಲಕ್ಷ ರೂ.ಗಳು ಬಾಕಿಯಿವೆ. ಹಲವಾರು ಸಲ ಜ್ಞಾಪಿಸಿದರೂ ಬೊರ್ಗೊಹೈನ್ ನಮ್ಮ ಹಣವನ್ನು ಪಾವತಿಸಿಲ್ಲ. ಆದರೆ ಅವರ ಸೂಚನೆಯ ಮೇರೆಗೆ ಆ.24ರಂದು ರಾತ್ರಿ 14-15 ದುಷ್ಕಮಿಗಳ ಗುಂಪು ಚೂರಿಗಳು, ಬಂದೂಕುಗಳು, ದೊಣ್ಣೆಗಳು ಮತ್ತು ಪ್ಲಾಸ್ಟಿಕ್ ಪೈಪ್‌ಗಳೊಂದಿಗೆ ನಮ್ಮ ವಾಸಸ್ಥಳಕ್ಕೆ ನುಗ್ಗಿ ನಮ್ಮನ್ನು ಥಳಿಸಿದ್ದಾರೆ. ಗುಂಡಿಟ್ಟು ಕೊಲ್ಲುವುದಾಗಿಯೂ ಅವರು ಬೆದರಿಸಿದ್ದರು. 15 ಲಕ್ಷ ರೂ.ಗಳನ್ನು ಮರೆತುಬಿಡುವಂತೆ ಮತ್ತು ತಕ್ಷಣ ಜಿಲ್ಲೆಯನ್ನು ತೊರೆಯುವಂತೆ ಧಮ್ಕಿ ಹಾಕಿದ್ದಾರೆ ’ಎಂದು ಕಾರ್ಮಿಕರ ಪೈಕಿ ರಜಿಬುಲ್ ಹಕ್ ಪೋಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ತಮ್ಮ ಜೀವಗಳಿಗೆ ಹೆದರಿ ಈ ಕಾರ್ಮಿಕರು ಘಟನೆ ನಡೆದ ರಾತ್ರಿಯೇ ಜಿಲ್ಲೆಯನ್ನು ತೊರೆದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಹೇಳಿಕೆಗಳನ್ನು ದಾಖಲಿಸಲು ತಮ್ಮ ಮುಂದೆ ಹಾಜರಾಗುವಂತೆ ಪೋಲಿಸರು ಆ.31ರಂದು ಈ ಕಾರ್ಮಿಕರಿಗೆ ಸೂಚಿಸಿದ್ದಾರೆ.