2,200 ಕೋಟಿ ರೂ.ಗಳ ಆನ್‌ಲೈನ್ ಟ್ರೇಡಿಂಗ್ ಹಗರಣ : ಅಸ್ಸಾಂ ನಟಿ ಮತ್ತು ಪತಿಯ ಬಂಧನ
ಸಾಂದರ್ಭಿಕ ಚಿತ್ರ
ಗುವಾಹಟಿ : 2,200 ಕೋಟಿ ರೂ.ಗಳ ಬೃಹತ್ ಆನ್‌ಲೈನ್ ಟ್ರೇಡಿಂಗ್ ಹಗರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಅಸ್ಸಾಮಿನ ನಟಿ ಹಾಗೂ ನೃತ್ಯ ನಿರ್ದೇಶಕಿ ಸುಮಿ ಬೋರಾ ಮತ್ತು ಫೋಟೊಗ್ರಾಫರ್ ಆಗಿರುವ ಆಕೆಯ ಪತಿ ತಾರ್ಕಿಕ ಬೋರಾ ಅವರನ್ನು ಪೋಲಿಸರು ಬಂಧಿಸಿದ್ದಾರೆ.
‘ಅವರ ಆಟ ಮುಗಿದಿದೆ. ಟೀಮ್ ಎಸ್‌ಟಿಎಫ್‌ಗೆ ಅಭಿನಂದನೆಗಳು’ ಎಂದು ಡಿಜಿಪಿ ಜಿ.ಪಿ.ಸಿಂಗ್ ಅವರು ಗುರುವಾರ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಅಪ್ಪರ್ ಅಸ್ಸಾಂ ನಿವಾಸಿಗಳಾದ ದಂಪತಿ 10 ದಿನಗಳಿಗೂ ಅಧಿಕ ಸಮಯ ಬಂಧನದಿಂದ ನುಣುಚಿಕೊಂಡ ಬಳಿಕ ದಿಬ್ರುಗಡದಲ್ಲಿ ಶರಣಾಗಿದ್ದು,ನಂತರ ಅವರನ್ನು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ತನ್ನ ವಶಕ್ಕೆ ತೆಗೆದುಕೊಂಡಿತ್ತು. ವಂಚಕ ಜಾಲದ ಕಿಂಗ್‌ಪಿನ್ ಬಿಶಾಲ್ ಫುಕನ್ (22) ಮತ್ತು ಆತನ ಸಹವರ್ತಿ ಸ್ವಪ್ನನೀಲ್ ದಾಸ್ ಎಂಬವರನ್ನು ಮೊದಲು ಬಂಧಿಸುವ ಮೂಲಕ ಈ ಜಾಲವನ್ನು ಭೇದಿಸಿದ್ದ ಪೋಲಿಸರು ಬಳಿಕ ತಾರ್ಕಿಕ್ ಸೋದರ ಅಮ್ಲಾನ್ ಬೋರಾ ಸೇರಿದಂತೆ ಹಲವರನ್ನು ಬಂಧಿಸಿದ್ದರು.
ಸುಮಿ ಬೋರಾ ಫುಕನ್‌ನಿಂದ ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ್ದರು ಮತ್ತು ರಾಜಸ್ಥಾನದಲ್ಲಿ ವೈಭವಯುತವಾಗಿ ನಡೆದಿದ್ದ ಆಕೆಯ ಮದುವೆಯಲ್ಲಿ ಫುಕನ್ ಸಾಕಷ್ಟು ಹಣವನ್ನು ವ್ಯಯಿಸಿದ್ದ ಎನ್ನಲಾಗಿದೆ.
ತಾನು ಶರಣಾಗುತ್ತಿರುವುದಾಗಿ ಬುಧವಾರ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಕಟಿಸಿದ್ದ ಸುಮಿ ಬೋರಾ, ಹಣಕಾಸು ವಂಚನೆಯಲ್ಲಿ ತನ್ನ ಪಾತ್ರವನ್ನು ನಿರಾಕರಿಸಿದ್ದರು. ತಾನು ಮಾಧ್ಯಮ ವಿಚಾರಣೆಗಳ ಬಲಿಪಶುವಾಗಿದ್ದೇನೆ ಎಂದು ಹೇಳಿಕೊಂಡಿದ್ದರು.
ಫುಕನ್ ಮತ್ತು ಆತನ ಸಹಚರರು ಅಮಾಯಕ ಹೂಡಿಕೆದಾರರಿಗೆ 60 ದಿನಗಳಲ್ಲಿ ಶೇ.30 ರಷ್ಟು ಪ್ರತಿಫಲವನ್ನು ನೀಡುವ ಆಮಿಷವನ್ನು ಒಡ್ಡುತ್ತಿದ್ದರು. ಆರಂಭದಲ್ಲಿ ಶೇ.30ರಿಂದ ಸೇ.50ರಷ್ಟು ಬಡ್ಡಿಯೊಂದಿಗೆ ಸಣ್ಣ ಹೂಡಿಕಗಳನ್ನು ಮರಳಿಸಿ ಹೂಡಿಕೆದಾರರ ವಿಶ್ವಾಸವನ್ನು ಗಳಿಸಿದ್ದರು. ಹೂಡಿಕೆದಾರರು ಇನ್ನೂ ಹೆಚ್ಚಿನ ಹಣವನ್ನು ತೊಡಗಿಸಿದ ಬಳಿಕ ಅಸಲು ಅಥವಾ ಬಡ್ಡಿಯನ್ನು ಪಾವತಿಸದೆ ವಂಚಿಸಿದ್ದರು. 1,500ಕ್ಕೂ ಹೆಚ್ಚಿನ ಜನರು ಈ ಗ್ಯಾಂಗ್‌ನಿಂದ ವಂಚನೆಗೊಳಗಾಗಿದ್ದಾರೆ.