×
Ad

ಅಸ್ಸಾಂ | ತೆರವು ಕಾರ್ಯಾಚರಣೆ ಸಂದರ್ಭ ಘರ್ಷಣೆ ; ಪೊಲೀಸರ ಗುಂಡಿಗೆ ಇಬ್ಬರು ಬಲಿ

Update: 2024-09-12 22:09 IST

   ಸಾಂದರ್ಭಿಕ ಚಿತ್ರ

ಗುವಾಹಟಿ : ಅಸ್ಸಾಂನ ಕಾಮರೂಪ್ ಜಿಲ್ಲೆಯಲ್ಲಿ ಗುರುವಾರ ನಡೆದ ತೆರವು ಕಾರ್ಯಾಚರಣೆ ಹಿಂಸಾಚಾರಕ್ಕೆ ತಿರುಗಿದ ಸಂದರ್ಭ ಪೊಲೀಸರು ಹಾರಿಸಿದ ಗುಂಡಿಗೆ ಕನಿಷ್ಠ ಇಬ್ಬರು ಬಲಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗುವಾಹಟಿಯ ಹೊರವಲಯದಲ್ಲಿರುವ ಸೋನಾಪುರ ಕಂದಾಯ ಸರ್ಕಲ್‌ನ ವ್ಯಾಪ್ತಿಯಲ್ಲಿ ಬರುವ ಕಚುಟಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿವಾಸಿಗಳೊಂದಿಗೆ ನಡೆದ ಈ ಘರ್ಷಣೆಯಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಘಟನೆಯಲ್ಲಿ ಮೃತರನ್ನು 18 ವರ್ಷದ ಝುಬೈರ್ ಅಲಿ ಹಾಗೂ ಹೈದರ್ ಅಲಿ ಎಂದು ಗುರುತಿಸಲಾಗಿದೆ. ಇಬ್ಬರೂ ಕಚುಟಲಿಯ ನಿವಾಸಿಗಳು ಎಂದು ಅವರು ಹೇಳಿದ್ದಾರೆ.

‘‘ಇಲ್ಲಿ ಜನರು ಟರ್ಪಾಲಿನ್ ಹಾಗೂ ತಾತ್ಕಾಲಿಕ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅಧಿಕಾರಿಗಳು ಗುರುವಾರ ಬೆಳಗ್ಗೆ 10 ಗಂಟೆಗೆ ಮತ್ತೆ ಬಂದರು. ಕೂಡಲೇ ತೆರವುಗೊಳ್ಳುವಂತೆ ಆದೇಶಿಸಿದರು. ಇದರಿಂದ ಹಲವರು ಆಕ್ರೋಶಿತರಾದರು’’ ಎಂದು ಝುಬೈರ್ ಅಲಿಯ ತಂದೆ 40 ವರ್ಷದ ಗಿಯಾಸುದ್ದೀನ್ ತಿಳಿಸಿದ್ದಾರೆ.

‘‘ಪೊಲೀಸರು ಗುಂಡು ಹಾರಿಸುವ ಸಂದರ್ಭ ನನ್ನ ಪುತ್ರ ಗುಂಪಿನಲ್ಲಿದ್ದ’’ ಎಂದು ಸಿಮೆಂಟ್ ಕಂಪೆನಿಯಲ್ಲಿ ದಿನಗೂಲಿ ನೌಕರನಾಗಿ ದುಡಿಯುತ್ತಿರುವ ಗಿಸಾಸುದ್ದೀನ್ ಹೇಳಿದ್ದಾರೆ. ತೆರವು ಕಾರ್ಯಾಚರಣೆ ಸಂದರ್ಭ ತಮ್ಮ ಮನೆಯನ್ನು ನೆಲಸಮಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘‘ಇಲ್ಲಿ ಕೆಲವರು ಟಪಾರ್ಲ್ ಮನೆಯಲ್ಲಿ ವಾಸಿಸುತ್ತಿದ್ದಾರೆ. ಜಿಲ್ಲಾಡಳಿತ ಸೋಮವಾರ ತೆರವು ಕಾರ್ಯಾಚರಣೆ ನಡೆಸಿತು. ಇಲ್ಲಿಂದ ತೆರವುಗೊಳ್ಳುವಂತೆ ಅಧಿಕಾರಿಗಳು ಇಂದು ಮತ್ತೆ ತಿಳಿಸಿದರು. ಇಲ್ಲಿನ ನಿವಾಸಿಗಳು ತೆರವುಗೊಳ್ಳಲು ನಿರಾಕರಿಸಿದರು. ಇದರಿಂದ ಘರ್ಷಣೆ ನಡೆಯಿತು’’ ಎಂದು ಕಚುಟಲಿ ನಿವಾಸಿ ಹಾಗೂ ಸೋನಾಪುರ ಪಂಚಾಯತ್‌ನ ಮಾಜಿ ಅಧ್ಯಕ್ಷ ಮೈನ್ ಹಕ್ ಚೌಧರಿ ತಿಳಿಸಿದ್ದಾರೆ.

ಬುಡಕಟ್ಟು ಪ್ರಾಬಲ್ಯದ ಪ್ರದೇಶದಲ್ಲಿರುವ ಇಲ್ಲಿನ ಸರಕಾರಿ ಭೂಮಿಯಿಂದ ಜಿಲ್ಲಾಡಳಿತ ಕನಿಷ್ಠ 60 ಕುಟುಂಬವನ್ನು ತೆರವುಗೊಳಿಸಿದೆ. ಆದರೆ, ಇಲ್ಲಿ ವಾಸಿಸುತ್ತಿರುವ ಮುಸ್ಲಿಮೇತರರ ವಿರುದ್ಧ ಕ್ರಮ ಕೈಗೊಳಿಸುತ್ತಿಲ್ಲ ಎಂದು ಚೌಧುರಿ ಆರೋಪಿಸಿದ್ದಾರೆ.

ಇದು ‘‘ಕೋಮು ತೆರವು ಕಾರ್ಯಾಚರಣೆ’’. ಮುಸ್ಲಿಮೇತರರು ಹಾಗೂ ಬುಡಕಟ್ಟು ಅಲ್ಲದವರನ್ನು ತೆರವುಗೊಳಿಸುತ್ತಿಲ್ಲ. ಇಲ್ಲಿ ಸಾವಿರಾರು ಮುಸ್ಲಿಮೇತರರು ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News