×
Ad

ಆರ್ಥಿಕ ಅಪರಾಧಿಗಳಿಂದ 1.8 ಶತಕೋಟಿ ಡಾಲರ್ ಮೌಲ್ಯದ ಆಸ್ತಿಗಳು ವಶಕ್ಕೆ: ಜಿತೇಂದ್ರ ಸಿಂಗ್

Update: 2023-09-07 22:49 IST

 ಜಿತೇಂದ್ರ ಸಿಂಗ್ | PHOTO: PTI  

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳಲ್ಲಿ ಆರ್ಥಿಕ ಅಪರಾಧಿಗಳು ಮತ್ತು ದೇಶಭ್ರಷ್ಟರಿಂದ 1.8 ಶತಕೋಟಿ ಡಾಲರ್ಗೂ ಅಧಿಕ ವೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸಹಾಯಕ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್ ಅವರು ಗುರುವಾರ ಇಲ್ಲಿ ತಿಳಿಸಿದರು.

ಇಲ್ಲಿಯ ಸಿಬಿಐ ಕೇಂದ್ರ ಕಚೇರಿಯಲ್ಲಿ ಪ್ರಪ್ರಥಮ ‘ಅಂತರರಾಷ್ಟ್ರೀಯ ಪೊಲೀಸ್ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ಅಕ್ಟೋಬರ್ 2022ರಲ್ಲಿ ಭಾರತವು 90ನೇ ಇಂಟರ್ಪೋಲ್ ಸಾಮಾನ್ಯ ಅಧಿವೇಶನವನ್ನು ಆಯೋಜಿಸಿದ ಬಳಿಕ ಕ್ರಿಮಿನಲ್ಗಳು ಮತ್ತು ದೇಶಭ್ರಷ್ಟರ ಹಸ್ತಾಂತರ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿದೆ. ಈ ವರ್ಷ ಈವರೆಗೆ 19 ಕ್ರಿಮಿನಲ್ಗಳು/ದೇಶಭ್ರಷ್ಟರು ಭಾರತಕ್ಕೆ ಹಸ್ತಾಂತರಗೊಂಡಿದ್ದಾರೆ. ಹಿಂದೆ ಪ್ರತಿ ವರ್ಷ ಸರಾಸರಿ 10 ಕ್ರಿಮಿನಲ್ಗಳು ಭಾರತಕ್ಕೆ ವಾಪಸಾಗುತ್ತಿದ್ದರು.

2022 ಮತ್ತು 2021ರಲ್ಲಿ ಇಂತಹವರ ಸಂಖ್ಯೆ ಅನುಕ್ರಮವಾಗಿ 27 ಮತ್ತು 18 ಆಗಿತ್ತು ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಆರ್ಥಿಕ ಅಪರಾಧಿಗಳ ಕಾಯ್ದೆಯನ್ನು ತಂದ ಬಳಿಕ ಕಳೆದ ಸುಮಾರು ನಾಲ್ಕು ವರ್ಷಗಳಲ್ಲಿ ಆರ್ಥಿಕ ಅಪರಾಧಿಗಳು ಮತ್ತು ದೇಶಭ್ರಷ್ಟರಿಂದ 1.8 ಶತಕೋಟಿ ಡಾಲರ್ಗೂ ಅಧಿಕ ವೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. 2014ರಿಂದ ಅಪರಾಧಿಗಳ 12 ಶತಕೋಟಿ ಡಾಲರ್ಗೂ ಅಧಿಕ ವೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳುವಲ್ಲಿ ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆ (ಪಿಎಂಎಲ್ಎ)ಯು ನೆರವಾಗಿದೆ ಎಂದು ಸಿಂಗ್ ತಿಳಿಸಿದರು.

ಅಂತರರಾಷ್ಟ್ರೀಯ ಪೋಲಿಸ್ ದಿನಾಚರಣೆಯ ಉದ್ಘಾಟನೆಗೆ ಮುನ್ನ ನಡೆದ ಸಮಾರಂಭದಲ್ಲಿ ಸಿಂಗ್ ಅವರು ಉತ್ತಮ ಸಾಧನೆ ಪ್ರದರ್ಶಿಸಿರುವ ಸಿಬಿಐ ಅಧಿಕಾರಿಗಳಿಗೆ ಭಾರತೀಯ ಪೋಲಿಸ್ ಪದಕಗಳನ್ನು ಪ್ರದಾನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News