ಗೊಂದಲಗಳನ್ನು ತಪ್ಪಿಸಿ, ನ್ಯೂನತೆಗಳನ್ನು ಸರಿಪಡಿಸಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ತರಾಟೆ
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ನೀಟ್-ಯುಜಿ ಪರೀಕ್ಷೆಯನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ಶುಕ್ರವಾರ ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು,ಪರೀಕ್ಷಾ ವ್ಯವಸ್ಥೆಯಲ್ಲಿ ಗೊಂದಲಗಳನ್ನು ತಪ್ಪಿಸುವಂತೆ ಮತ್ತು ನ್ಯೂನತೆಗಳನ್ನು ಸರಿಪಡಿಸುವಂತೆ ನಿರ್ದೇಶನ ನೀಡಿದೆ. ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ತನ್ನ ಸೈಬರ್‌ಸೆಕ್ಯೂರಿಟಿ ವ್ಯವಸ್ಥೆಯಲ್ಲಿನ ದೋಷಗಳನ್ನು ಗುರುತಿಸಲು ತಂತ್ರಜ್ಞಾನವನ್ನು ಬಳಸುವಂತೆ ನ್ಯಾಯಾಲಯವು ಸೂಚಿಸಿದೆ.
ಮೇ ೫ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದ್ದ ಸರ್ವೋಚ್ಚ ನ್ಯಾಯಾಲಯವು, ‘ರಚನಾತ್ಮಕ ಪ್ರಕ್ರಿಯೆಗಳಲ್ಲಿನ ಎಲ್ಲ ನ್ಯೂನತೆಗಳನ್ನು ನಾವು ಎತ್ತಿ ತೋರಿಸಿದ್ದೇವೆ. ಪರೀಕ್ಷಾ ವ್ಯವಸ್ಥೆಯಲ್ಲಿನ ಗೊಂದಲಗಳು ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ರಕ್ಷಿಸುವುದಿಲ್ಲ’ ಎಂದು ಹೇಳಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಕೇಂದ್ರ ಸರಕಾರವು ರಚಿಸಿರುವ ತಜ್ಞರ ಉನ್ನತ ಮಟ್ಟದ ಸಮಿತಿಗೆ ತನ್ನ ವರದಿಯನ್ನು ಸಲ್ಲಿಸಲು ಸೆ.30ರವರೆಗೆ ಕಾಲಾವಕಾಶವನ್ನು ನೀಡಿತು. ಇಸ್ರೋದ ಮಾಜಿ ಮುಖ್ಯಸ್ಥ ಡಾ.ಕೆ.ರಾಧಾಕೃಷ್ಣನ್ ನೇತೃತ್ವದ ಸಮಿತಿಯು ಮಾಜಿ ಏಮ್ಸ್ (ದಿಲ್ಲಿ) ನಿರ್ದೇಶಕ ಡಾ.ರಣದೀಪ ಗುಲೇರಿಯಾ ಸೇರಿದಂತೆ ಏಳು ಸದಸ್ಯರನ್ನು ಹೊಂದಿದೆ. ಸಂಪೂರ್ಣ ಪರೀಕ್ಷಾ ಪದ್ಧತಿಯ ವಿಶ್ಲೇಷಣೆ ಮತ್ತು ಅದನ್ನು ಹೆಚ್ಚು ಸಮರ್ಥವಾಗಿಸಲು ಬದಲಾವಣೆಗಳನ್ನು ಸೂಚಿಸುವ ಹೊಣೆಗಾರಿಕೆಯನ್ನು ಸಮಿತಿಗೆ ವಹಿಸಲಾಗಿದೆ.
ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಮುಖ ಪ್ರಶ್ನೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು, ಯಾವುದೇ ವ್ಯವಸ್ಥಿತ ಉಲ್ಲಂಘನೆ ನಡೆದಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆಯು ಬಿಹಾರದ ಪಾಟ್ನಾ ಮತ್ತು ಜಾರ್ಖಂಡ್‌ನ ಹಜಾರಿಬಾಗ್‌ಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿತು.
ಹಜಾರಿಬಾಗ್ ಪ್ರಶ್ನೆಪತ್ರಿಕೆ ಸೋರಿಕೆಯ ಮೂಲಕೇಂದ್ರ ಎಂದು ಸಿಬಿಐ ಹೇಳಿದೆ. ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡುವ ರಾಷ್ಟ್ರವ್ಯಾಪಿ ‘ಸಾಲ್ವರ ಗ್ಯಾಂಗ್’ ಕುರಿತು ತನಿಖೆಯನ್ನು ಸಿಬಿಐ ನಡೆಸುತ್ತಿದ್ದು,ಜಾಲದ ರೂವಾರಿ ಎನ್ನಲಾದ ರಾಕೇಶ ರಂಜನ್ ಅಲಿಯಾಸ್ ವಿಕಿ ಸೇರಿದಂತೆ ಹಲವರನ್ನು ಬಂಧಿಸಿದೆ.