ವಿವಿಯಲ್ಲಿ ಶಿವರಾತ್ರಿಯಂದು ಮಾಂಸಾಹಾರ ನೀಡಿದ್ದಕ್ಕೆ ಘರ್ಷಣೆ: ಬಾಂಗ್ಲಾದೇಶಿ ವಿದ್ಯಾರ್ಥಿಯ ಉಚ್ಚಾಟನೆ
ಸಾಂದರ್ಭಿಕ ಚಿತ್ರ (credit: freepik.com)
ಹೊಸದಿಲ್ಲಿ,: ಮಹಾ ಶಿವರಾತ್ರಿಯಂದು ಮಾಂಸಾಹಾರವನ್ನು ನೀಡಿದ್ದಕ್ಕಾಗಿ ನಡೆದ ಘರ್ಷಣೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಇಲ್ಲಿಯ ಸೌತ್ ಏಶ್ಯನ್ ವಿವಿ(ಎಸ್‌ಎಯು)ಯ ಬಾಂಗ್ಲಾದೇಶಿ ಪಿಎಚ್‌ಡಿ ವಿದ್ಯಾರ್ಥಿಯನ್ನು ಉಚ್ಚಾಟಿಸಲಾಗಿದ್ದು,ವಿದ್ಯಾರ್ಥಿಗಳ ಮೆಸ್‌ನ ಕಾರ್ಯದರ್ಶಿಗೆ 5,000 ರೂ.ದಂಡವನ್ನು ವಿಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ವಿವಿಯ ಶಿಸ್ತು ಸಮಿತಿಯ ತನಿಖೆಯ ಬಳಿಕ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಫೆ.16ರಂದು ಮಹಾಶಿವರಾತ್ರಿಯ ದಿನ ಮೆಸ್‌ನಲ್ಲಿ ಮಾಂಸಾಹಾರವನ್ನು ನೀಡಿದ್ದಕ್ಕಾಗಿ ವಿವಿಯ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು.
ವಿವರವಾದ ವಿಚಾರಣೆಯ ಬಳಿಕ ಪಿಎಚ್‌ಡಿ ವಿದ್ಯಾರ್ಥಿ ಸುದೀಪ್ತೋ ದಾಸ್ ತಪ್ಪಿತಸ್ಥರೆನ್ನುವುದು ಸಾಬೀತಾಗಿದೆ. ಅವರನ್ನು ತಕ್ಷಣ ಉಚ್ಚಾಟಿಸುವಂತೆ ವಿವಿಯು ಆದೇಶಿಸಿದೆ. ಎಸ್‌ಎಯುಯಲ್ಲಿ ಭವಿಷ್ಯದ ಯಾವುದೇ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸುವುದರಿಂದ ಅವರನ್ನು ಶಾಶ್ವತವಾಗಿ ಅನರ್ಹಗೊಳಿಸಲಾಗಿದೆ ಮತ್ತು 24 ಗಂಟೆಗಳಲ್ಲಿ ಹಾಸ್ಟೆಲ್ ಕೊಠಡಿಯನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
2022ರಲ್ಲಿ ಇಂತಹುದೇ ಅಶಿಸ್ತಿನ ನಡವಳಿಕೆಗಾಗಿ ದಾಸ್‌ರನ್ನು ಅಮಾನತುಗೊಳಿಸಿದ್ದನ್ನು ಉಚ್ಚಾಟನೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಮೆಸ್‌ನಲ್ಲಿ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಲ್ಲಿ ವೈಫಲ್ಯಕ್ಕಾಗಿ ಕಾರ್ಯದರ್ಶಿ ಯಶದಾ ಸಾವಂತ ಅವರಿಗೆ 5,000 ರೂ.ದಂಡವನ್ನು ವಿಧಿಸಲಾಗಿದೆ.
ಘರ್ಷಣೆಯಲ್ಲಿ ಭಾಗಿಯಾಗಿದ್ದ ಎಸ್‌ಎಫ್‌ಐ ಮತ್ತು ಎಬಿವಿಪಿ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಪರಸ್ಪರರನ್ನು ಆರೋಪಿಸಿವೆ.
ಎಬಿವಿಪಿ ಸದಸ್ಯರು ತಮ್ಮ ಆಹಾರ ಪದ್ಧತಿಯನ್ನು ಇತರರ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಎಸ್‌ಎಫ್‌ಐ,ಘಟನೆಯನ್ನು ಜಾತ್ಯತೀತ ಮೌಲ್ಯಗಳ ಮೇಲಿನ ದಾಳಿ ಎಂದು ಬಣ್ಣಿಸಿದೆ.
ಆದರೆ, ಉಪವಾಸದ ದಿನದಂದು ಮಾಂಸಾಹಾರವನ್ನು ಬಡಿಸುವುದು ಸಮರ್ಪಕವಲ್ಲ ಮತ್ತು ಇಂತಹ ಕ್ರಮಗಳು ಧಾರ್ಮಿಕ ಸಾಮರಸ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ ಎಂದು ಎಬಿವಿಪಿ ಹೇಳಿದೆ.