‘ಮಹಾ ಜಂಗಲ್ ರಾಜ್’ಅನ್ನು ಅಂತ್ಯಗೊಳಿಸಲು ಬಂಗಾಳ ಬಯಸಿದೆ: ಟಿಎಂಸಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಪ್ರಧಾನಿ ಮೋದಿ|Photo: economictimes
ಸಿಂಗೂರ್ (ಪ.ಬಂಗಾಳ),ಜ.18: ಬಿಜೆಪಿ ಮತ್ತು ಎನ್‌ಡಿಎ ಬಿಹಾರದಲ್ಲಿ ‘ಜಂಗಲ್ ರಾಜ್’ ಅನ್ನು ಅಂತ್ಯಗೊಳಿಸಿವೆ. ಈಗ ಪ.ಬಂಗಾಳವು ಟಿಎಂಸಿಯ ‘ಮಹಾ ಜಂಗಲ್ ರಾಜ್’ಗೆ ವಿದಾಯ ಹೇಳಲು ಸಜ್ಜಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಇಲ್ಲಿ ಹೇಳಿದರು. ತನ್ಮೂಲಕ ಅವರು ಈ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ.
ಇಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಪಲ್ಟಾನೊ ದೊರ್ಕಾರ್, ಚಾಯಿ ಬಿಜೆಪಿ ಸೊರ್ಕಾರ್ (ಬದಲಾವಣೆ ಅಗತ್ಯವಿದೆ, ಬಿಜೆಪಿ ಸರಕಾರ ಬೇಕು)’ ಎಂಬ ಶಪಥವನ್ನು ತೊಡುವಂತೆ ಜನರನ್ನು ವಿನಂತಿಸಿಕೊಂಡರು.
‘ದಿಲ್ಲಿಯ ಇಂಡಿಯಾ ಗೇಟ್‌ನ ಎದುರು ನೇತಾಜಿ ಸುಭಾಷಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದು ಬಿಜೆಪಿ ಸರಕಾರ. ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ಆಜಾದ್ ಹಿಂದ್ ಫೌಜ್‌ನ ಕೊಡುಗೆಯನ್ನು ಗೌರವಿಸಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ದ್ವೀಪವೊಂದಕ್ಕೆ ನೇತಾಜಿಯವರ ಹೆಸರನ್ನಿರಿಸಲಾಗಿದೆ. ದಿಲ್ಲಿಯಲ್ಲಿ ಬಿಜೆಪಿ ಸರಕಾರವನ್ನು ನೀವು ಆಯ್ಕೆ ಮಾಡಿದಾಗ ಬಂಗಾಳಿ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಲಭಿಸಿದೆ. ಬಿಜೆಪಿಯ ಪ್ರಯತ್ನಗಳಿಂದಾಗಿ ದುರ್ಗಾ ಪೂಜೆಗೆ ಯನೆಸ್ಕೋ ವಿಶ್ವ ಪರಂಪರೆ ಮಾನ್ಯತೆ ದೊರಕಿದೆ. ಟಿಎಂಸಿಯಲ್ಲಿಯ ಈ ಜನರು ಸೋನಿಯಾ ಗಾಂಧಿಯವರ ಸರಕಾರದಲ್ಲಿ (ಯುಪಿಎ II) ಪಾಲುದಾರರಾಗಿದ್ದರು. ಅವರು ಇದನ್ನೆಲ್ಲ ಮಾಡಲು ಸಾಧ್ಯವಿರಲಿಲ್ಲವೇ? ಅದನ್ನು ಮಾಡಿದ್ದು ಬಂಗಾಳದ ಮೇಲೆ ಇಷ್ಟೊಂದು ಪ್ರೀತಿಯನ್ನು ಹೊಂದಿರುವ ಮೋದಿ’ ಎಂದು ಪ್ರಧಾನಿ ನುಡಿದರು.
ರಾಜಾರಾಮ್ ಮೋಹನ ರಾಯ್, ಈಶ್ವರಚಂದ್ರ ವಿದ್ಯಾಸಾಗರ ಮತ್ತು ಸ್ವಾಮಿ ವಿವೇಕಾನಂದರಂತಹ ಬಂಗಾಳಿ ದಿಗ್ಗಜರನ್ನು ರಾಷ್ಟ್ರಮಟ್ಟದಲ್ಲಿ ಗೌರವಿಸಿದ್ದು ತನ್ನ ಸರಕಾರ ಎಂದು ಹೇಳಿದ ಮೋದಿ,ಏಕೆಂದರೆ ಬಿಜೆಪಿ ಅಭಿವೃದ್ಧಿ ಮತ್ತು ಪರಂಪರೆಯ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದರು.
ಬಂಗಾಳವು ಬೃಹತ್ ನದಿಗಳು, ಸುದೀರ್ಘ ಕರಾವಳಿ ಮತ್ತು ಫಲವತ್ತಾದ ಭೂಮಿ ಸೇರಿದಂತೆ ಹಲವು ಸಂಪನ್ಮೂಲಗಳನ್ನು ಹೊಂದಿದೆ. ಪ್ರತಿ ಜಿಲ್ಲೆಯೂ ಏನಾದರೊಂದು ವಿಶೇಷವನ್ನು ಹೊಂದಿದೆ. ಇಲ್ಲಿಯ ಜನರಲ್ಲಿ ಬುದ್ಧಿವಂತಿಕೆ, ಸಾಮರ್ಥ್ಯ ಮತ್ತು ನಿಷ್ಠೆ ಇದೆ. ಬಿಜೆಪಿ ಪ್ರತಿ ಜಿಲ್ಲೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಅವರು ಭರವಸೆ ನೀಡಿದರು.
ಟಿಎಂಸಿ ಸರಕಾರವು ಕೇಂದ್ರದ ಯೋಜನೆಗಳನ್ನು ತಡೆಹಿಡಿದಿದೆ ಎಂದು ಆರೋಪಿಸಿದ ಪ್ರಧಾನಿ, ಅವರಿಗೆ ಮೋದಿ ಮತ್ತು ಬಿಜೆಪಿಯೊಂದಿಗೆ ಸಮಸ್ಯೆಯಿದ್ದರೆ ಅದು ತನಗೆ ಅರ್ಥವಾಗುತ್ತದೆ. ಆದರೆ ಟಿಎಂಸಿಯು ಬಂಗಾಳದ ಜನರು ತೊಂದರೆ ಅನುಭವಿಸುವಂತೆ ಮಾಡುತ್ತಿದೆ ಎಂದು ಹೇಳಿದರು.