×
Ad

ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ವಿರುದ್ಧದ ಪ್ರಕರಣದಲ್ಲಿ ಯಾವುದೇ ತಿರುಳಿಲ್ಲ: ಗೀತಾಂಜಲಿ ಆಂಗ್ಮೊ

Update: 2026-01-18 19:26 IST

ಗೀತಾಂಜಲಿ ಆಂಗ್ಮೊ| photo: PTI

ಹೊಸದಿಲ್ಲಿ, ಜ. 17: ಪರಿಸರ ಹೋರಾಟಗಾರ ಸೋನಮ್ ವಾಗ್ಚುಕ್ ಅವರ ಬಂಧನ ದೇಶದಲ್ಲಿ ಪ್ರಜಾಪ್ರಭುತ್ವದ ಸ್ಥಿತಿಯನ್ನು ಪ್ರತಿಬಿಂಬಿಸಿದೆ. ಇಲ್ಲಿ ಜನರನ್ನು ಅಕ್ರಮವಾಗಿ ಬಂಧಿಸಲು ಅಧಿಕಾರವನ್ನು ಬಳಸಲಾಗುತ್ತದೆ ಎಂದು ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಪ್ರತಿಪಾದಿಸಿದ್ದಾರೆ.

ಸರಕಾರ ನ್ಯಾಯಾಲಯದಲ್ಲಿ ಪದೇ ಪದೇ ಹೊಸ ದಿನಾಂಕವನ್ನು ಕೇಳುತ್ತಿರುವುದರಿಂದ ಈ ಪ್ರಕರಣದಲ್ಲಿ ಯಾವುದೇ ತಿರುಳಿಲ್ಲವೆಂದು ಅವರು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಆಂಗ್ಮೊ ಅವರು, ಸೋನಮ್ ವಾಂಗ್ಚುಕ್ ಈಗಾಗಲೇ ಬಿಡುಗಡೆಗೊಳ್ಳಬೇಕಿತ್ತು. ಆದರೆ, ಅಧಿಕಾರಿಗಳ ಕಾರ್ಯ ಲೋಪದಿಂದ ಅವರು ಬಿಡುಗಡೆಯಾಗಿಲ್ಲ. ಇದು ಮುಚ್ಚಿದ ಪ್ರಕರಣ ಎಂದರು.

ಸೋನಮ್ ವಾಂಗ್ಚುಕ್ ಅವರ ಬಂಧನಕ್ಕೆ ಬಲವಾದ ವಿರೋಧ ವ್ಯಕ್ತವಾಗದಿರುವುದು ತನಗೆ ನಿರಾಶೆ ತಂದಿದೆ. ನಾವು ಮೌನವಾಗಿರಲು ಸಾಧ್ಯವಿಲ್ಲ ಎಂದು ಹೇಳಿದ ಆಂಗ್ಮೊ, ಅವರ ಬಂಧನಕ್ಕೆ ಸಾಮೂಹಿಕ ಹಾಗೂ ತೀವ್ರ ಪ್ರತಿಭಟನೆಗೆ ಕರೆ ನೀಡಿದರು.

ಇದು ಸೋನಮ್ ವಾಗ್ಚುಕ್ ಅವರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ದೇಶದ ಪ್ರಜಾಪ್ರಭುತ್ವದ ಸ್ಥಿತಿಗೆ ಸಂಬಂಧಿಸಿದ ವಿಷಯ ಕೂಡ ಆಗಿದೆ. ಸೋನಮ್ ವಾಂಗ್ಚುಕ್ ಅವರಂತಹ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾದರೆ, ಅದು ಮುಂದೆ ಯಾರನ್ನೂ ಬಂಧಿಸಬಹುದು ಎಂದು ಆಂಗ್ಮೊ ಹೇಳಿದರು.

ಲಡಾಖ್‌ಗೆ ರಾಜ್ಯದ ಸ್ಥಾನ ಮಾನ ಹಾಗೂ 6ನೇ ಪರಿಚ್ಛೇದದಲ್ಲಿ ಸ್ಥಾನಕ್ಕೆ ಆಗ್ರಹಿಸಿ ಲಡಾಖ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು ಹಾಗೂ 90 ಮಂದಿ ಗಾಯಗೊಂಡಿದ್ದರು. ಅನಂತರ ಕಳೆದ ಸೆಪ್ಟಂಬರ್ 26ರಂದು ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಿ ಜೈಲಿನಲ್ಲಿ ಇರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News