×
Ad

ಬಿಹಾರ: ದಲಿತ ಬಾಲಕಿಯ ಅತ್ಯಾಚಾರ; ಚಿಕಿತ್ಸೆಗಾಗಿ 5 ಗಂಟೆ ಕಾದ ಸಂತ್ರಸ್ತೆ ಮೃತ್ಯು

Update: 2025-06-02 21:15 IST

ಸಾಂದರ್ಭಿಕ ಚಿತ್ರ

ಪಾಟ್ನಾ: ಒಂಭತ್ತು ವರ್ಷದ ದಲಿತ ಬಾಲಕಿಯ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ಎಸಗಿ, ಕತ್ತು ಕೊಯ್ದು ಪರಾರಿಯಾಗಿರುವ ಘಟನೆ ಬಿಹಾರದ ಮುಝಪ್ಫರ್‌ಪುರದಲ್ಲಿ ನಡೆದಿದೆ. ಅನಂತರ ಅರೆ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕಿಯನ್ನು ಆಕೆಯ ತಾಯಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಪಾಟ್ನಾದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಆದರೆ, ಅಲ್ಲಿ ಬಾಲಕಿಗೆ ಚಿಕಿತ್ಸೆ ನೀಡುವ ಮುನ್ನ 5 ಗಂಟೆ ಕಾಯಿಸಲಾಗಿದೆ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ. ಬಾಲಕಿ ಮರುದಿನ ಸಾವನ್ನಪ್ಪಿದ್ದಾಳೆ.

ಆರೋಪಿ ರೋಹಿತ್ ಸಾಹ್ನಿ ಎಂಬಾತ 9 ವರ್ಷದ ದಲಿತ ಬಾಲಕಿಗೆ ತಿಂಡಿ ನೀಡುವ ಆಮಿಷವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅನಂತರ ಆಕೆಯ ಕತ್ತು ಕತ್ತರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂದರ್ಭ ಬಾಲಕಿಯ ತಾಯಿ ನಿದ್ರಿಸುತ್ತಿದ್ದರು. ತಾಯಿ ಎದ್ದು ಹುಡುಕಾಡಿದಾಗ ಬಾಲಕಿಯನ್ನು ಸಾಹ್ನಿ ತನ್ನ ಸೈಕಲ್‌ನಲ್ಲಿ ಕರೆದುಕೊಂಡು ಹೋಗುತ್ತಿರುವುದನ್ನು ನೋಡಿರುವುದಾಗಿ ನೆರೆಹೊರೆಯವರು ತಿಳಿಸಿದ್ದಾರೆ. ಸಾಹ್ನಿಯನ್ನು ಹಿಡಿದು ಪ್ರಶ್ನಿಸಿದಾಗ ಆತ ಬಾಲಕಿ ಎಲ್ಲಿದ್ದಾಳೆ ಎಂದು ತಿಳಿಸಿದ. ಆತ ತಿಳಿಸಿದ ಸ್ಥಳದಲ್ಲಿ ಬಾಲಕಿ ಗಾಯಗೊಂಡ ಸ್ಥಿತಿಯಲ್ಲಿ ಅರೆನಗ್ನಾವಸ್ಥೆಯಲ್ಲಿ ಪತ್ತೆಯಾದಳು. ತಾಯಿ ಆಕೆಯನ್ನು ಮುಝಪ್ಫರ್‌ಪುರದಲ್ಲಿರುವ ಶ್ರೀಕೃಷ್ಣಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿಂದ ಉತ್ತಮ ಚಿಕಿತ್ಸೆಗೆ ಪಾಟ್ನಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು.

ಪಾಟ್ನಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿಲ್ಲದ ಕಾರಣ 5 ಗಂಟೆಗಳ ಕಾಲ ಕಾಯಿಸಲಾಯಿತು ಎಂದು ಬಾಲಕಿಯ ಕುಟುಂಬ ಆರೋಪಿಸಿದೆ. ಬಾಲಕಿ ನಿನ್ನೆ ಸಾವನ್ನಪ್ಪಿದ್ದಾಳೆ. ಚಿಕಿತ್ಸೆ ನೀಡಲು ವಿಳಂಬವಾಗಿರುವುದು ಬಾಲಕಿ ಸಾವನ್ನಪ್ಪಲು ಕಾರಣ ಎಂದು ಆಕೆಯ ಕುಟುಂಬ ತಿಳಿಸಿದೆ. ಆದರೆ, ಆಸ್ಪತ್ರೆಯ ಆಡಳಿತ ಮಂಡಳಿ ಈ ಆರೋಪವನ್ನು ತಳ್ಳಿ ಹಾಕಿದೆ.

‘‘ಬಾಲಕಿಯನ್ನು ಇಲ್ಲಿ ದಾಖಲಿಸಿದಾಗ, ನಾವು ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ನೀಡಿದ್ದೇವೆ. ಚಿಕಿತ್ಸೆ ನೀಡುವಲ್ಲಿ ವಿಳಂಬವಾಗಿದೆ ಎಂಬ ಕುಟುಂಬದ ಆರೋಪ ಆಧಾರ ರಹಿತ. ನಮಗೆ ಸಾಧ್ಯವಾಗುವ ಎಲ್ಲವನ್ನೂ ಮಾಡಿದ್ದೇವೆ. ಎಲ್ಲಾ ವಿಭಾಗಳನ್ನು ಸಂಪರ್ಕಿಸಿ ಐಸಿಯುನಲ್ಲಿ ಚಿಕಿತ್ಸೆ ದೊರೆಯುವಂತೆ ನೋಡಿಕೊಂಡಿದ್ದೇವೆ’’ ಎಂದು ಪಾಟ್ನಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಅಧೀಕ್ಷಕ ಅಭಿಜಿತ್ ಸಿಂಗ್ ತಿಳಿಸಿದ್ದಾರೆ.

ಈ ವರ್ಷಾಂತ್ಯದಲ್ಲಿ ಬಿಹಾರದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಈ ಆಘಾತಕಾರಿ ಘಟನೆ ನಡೆದಿದೆ. ಇದು ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ, ಆರೋಗ್ಯ ಮೂಲ ಸೌರ್ಕರ್ಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಈ ಘಟನೆ ಕುರಿತಂತೆ ಪ್ರತಿಪಕ್ಷಗಳಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಹಾಗೂ ಕಾಂಗ್ರೆಸ್ ಬಿಜೆಪಿ-ಜೆಡಿಯು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಬಾಲಕಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕಿದ್ದರೆ, ಆಕೆಯನ್ನು ಉಳಿಸಬಹುದಿತ್ತು ಎಂದು ಅದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News