×
Ad

ಬಿಹಾರದಲ್ಲಿ 70,877.61 ಕೋಟಿ ರೂ.ಗಳ ಅಕ್ರಮಗಳು: ಸಿಎಜಿ ವರದಿ

Update: 2025-07-28 20:48 IST
PC : PTI 

ಹೊಸದಿಲ್ಲಿ: ಭಾರತದ ಮಹಾ ಲೇಖಪಾಲ(ಸಿಎಜಿ)ರು ಜು.24ರಂದು ಬಿಹಾರದ ಹಣಕಾಸುಗಳ ಕುರಿತು ಮಂಡಿಸಿರುವ ವರದಿಯು, ಮಾ.31,2024ಕ್ಕೆ ಇದ್ದಂತೆ 70,877.61 ಕೋಟಿ ರೂ.ಗಳ 49,649 ಬಳಕೆ ಪ್ರಮಾಣಪತ್ರಗಳು ಬಾಕಿಯಿರುವುದು ಸೇರಿದಂತೆ ವ್ಯಾಪಕ ಹಣಕಾಸು ಅಕ್ರಮಗಳನ್ನು ಬೆಟ್ಟು ಮಾಡಿದೆ ಎಂದು thewire.in ವರದಿ ಮಾಡಿದೆ.

ಸರಕಾರಿ ಇಲಾಖೆಯು ಕೈಗೆತ್ತಿಕೊಂಡ ಕೆಲಸವು ಪೂರ್ಣವಾಗಿದೆ ಮತ್ತು ಬಳಕೆಗೆ ಸೂಕ್ತವಾಗಿದೆ ಎನ್ನುವುದನ್ನು ಬಳಕೆ ಪ್ರಮಾಣಪತ್ರವು ಸೂಚಿಸುತ್ತದೆ.

ಮಾ.31,2024ಕ್ಕೆ 184.52 ಕೋಟಿ ರೂ.ಗಳ ತಾತ್ಕಾಲಿಕ ಮುಂಗಡಗಳು ಮತ್ತು 25.46 ಕೋಟಿ ರೂ.ಗಳ ಮುಂಗಡಗಳನ್ನು ಹೊಂದಾಣಿಕೆ ಮಾಡಲಾಗಿಲ್ಲ ಎಂದು ವರದಿಯು ಹೇಳಿದೆ.

ಕಟ್ಟಡ ನಿರ್ಮಾಣ,ಜನಾರೋಗ್ಯ ಇಂಜಿನಿಯರಿಂಗ್, ನೀರಾವರಿ,ರಸ್ತೆ ನಿರ್ಮಾಣ(ರಾಷ್ಟ್ರೀಯ ಹೆದ್ದಾರಿ),ಗ್ರಾಮೀಣ ಕಾಮಗಾರಿಗಳು,ಸಣ್ಣ ನೀರಾವರಿ,ಸ್ಥಳೀಯ ಪ್ರದೇಶ ಇಂಜಿನಿಯರಿಂಗ್ ಸಂಸ್ಥೆ ಮತ್ತು ರಸ್ತೆ ನಿರ್ಮಾಣದಂತಹ ಇಲಾಖೆಗಳಿಂದ ಈ ಹೊಂದಾಣಿಕೆಯಾಗದ ಮೊತ್ತಗಳನ್ನು ಸರಿಹೊಂದಿಸಬೇಕಿತ್ತು ಮತ್ತು ಸಂಬಂಧಪಟ್ಟ ಖಜಾನೆಗೆ ಜಮಾ ಮಾಡಬೇಕಿತ್ತು ಎಂದು ವರದಿಯು ಒತ್ತಿ ಹೇಳಿದೆ.

ವರದಿಯು ಪಂಚಾಯತ್ ರಾಜ್(28,154.10 ಕೋಟಿ ರೂ.),ಶಿಕ್ಷಣ(12,623.67 ಕೋಟಿ ರೂ.), ನಗರಾಭಿವೃದ್ಧಿ(11,065.50 ಕೋಟಿ ರೂ.), ಗ್ರಾಮೀಣಾಭಿವೃದ್ಧಿ(7,800.48 ಕೋಟಿ ರೂ.) ಮತ್ತು ಕೃಷಿ(2,107.63 ಕೋಟಿ ರೂ.) ಇವುಗಳನ್ನು ಐದು ಪ್ರಮುಖ ತಪ್ಪಿತಸ್ಥ ಇಲಾಖೆಗಳೆಂದು ಗುರುತಿಸಿದ್ದು, ಬ್ರಾಕೆಟ್‌ನಲ್ಲಿರುವುದು ಅವು ಖಜಾನೆಗೆ ಜಮಾ ಮಾಡಲು ವಿಫಲಗೊಂಡ ಮೊತ್ತಗಳಾಗಿವೆ.

ಸಂಕ್ಷಿಪ್ತ ಅನಿಶ್ಚಿತ(ಎಸಿ) ಬಿಲ್‌ಗಳ ಮೂಲಕ ಪಡೆದುಕೊಳ್ಳಲಾದ ಮುಂಗಡ ಹಣದ ಕುರಿತು ವಿವರವಾದ ಅನಿಶ್ಚಿತ(ಡಿಸಿ) ಬಿಲ್‌ಗಳನ್ನು ಸಲ್ಲಿಸುವುದು ಅಗತ್ಯವಾಗಿದ್ದರೂ, 9,205.76 ಕೋಟಿ ರೂ.ಮೌಲ್ಯದ 22,130 ಎಸಿ ಬಿಲ್‌ಗಳಿಗೆ ಸಂಬಂಧಿಸಿದಂತೆ ಡಿಸಿ ಬಿಲ್‌ಗಳನ್ನು ಸಲ್ಲಿಸಲಾಗಿಲ್ಲ ಎನ್ನುವುದನ್ನು ಸಿಎಜಿ ವರದಿಯು ಗಮನಿಸಿದೆ.

ಹಣಕಾಸು ವರ್ಷದಲ್ಲಿ ಬಡ್ಡಿಸಹಿತ ಠೇವಣಿಗಳ ಮೇಲೆ 144.20 ಕೋಟಿ ರೂ.ಗಳ ಬಡ್ಡಿ ಪಾವತಿಯ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸುವಲ್ಲಿ ರಾಜ್ಯ ಸರಕಾರವು ವಿಫಲಗೊಂಡಿದೆ ಎಂದು ಹೇಳಿರುವ ವರದಿಯು,ಬಜೆಟ್ ದಾಖಲೆಗಳಲ್ಲಿ ಅಥವಾ ವಾರ್ಷಿಕ ಹಣಕಾಸು ಹೇಳಿಕೆಗಳಲ್ಲಿ 53.48 ಕೋಟಿ ರೂ.ಗಳ ಬಜೆಟೇತರ ಹೊಣೆಗಾರಿಕೆಗಳನ್ನು ಬಹಿರಂಗಗೊಳಿಸಲಾಗಿಲ್ಲ ಎಂದು ಎತ್ತಿ ತೋರಿಸಿದೆ.

ನಿಗದಿತ ಅವಧಿಯೊಳಗೆ ಬಳಕೆ ಪ್ರಮಾಣಪತ್ರ(ಯುಸಿ)ಗಳನ್ನು ಸಲ್ಲಿಸುವುದು ಅಗತ್ಯವಾಗಿದ್ದರೂ ಮಾ.31,2024ಕ್ಕೆ ಇದ್ದಂತೆ ಬಿಹಾರದ ಅಕೌಂಟಂಟ್ ಜನರಲ್ 70,877.61 ಕೋಟಿ ರೂ.ಗಳ 49,649 ಬಾಕಿ ಉಳಿದಿರುವ ಯುಸಿಗಳನ್ನು ಸ್ವೀಕರಿಸಿಲ್ಲ. ಯುಸಿಗಳ ಅನುಪಸ್ಥಿತಿಯಲ್ಲಿ ಹಂಚಿಕೆ ಮಾಡಲಾಗಿದ್ದ ಹಣವನ್ನು ನಿಗದಿತ ಉದ್ದೇಶಕ್ಕಾಗಿ ಬಳಸಲಾಗಿದೆ ಎನ್ನುವ ಯಾವುದೇ ಭರವಸೆಯಿಲ್ಲ. ಅಲ್ಲದೆ ಯುಸಿಗಳು ಹೆಚ್ಚಿನ ಪ್ರಮಾಣದಲ್ಲಿ ಬಾಕಿಯುಳಿದಿರುವುದು ದುರುಪಯೋಗ ಮತ್ತು ಅನ್ಯ ಉದ್ದೇಶಕ್ಕೆ ಹಣದ ಬಳಕೆಯ ಅಪಾಯಗಳಿಂದ ಕೂಡಿದೆ ಎಂದು ವರದಿಯು ತಿಳಿಸಿದೆ.

ರಾಜ್ಯವು 65,512.05 ಕೋಟಿ ರೂ.ಗಳ ಒಟ್ಟು ಉಳಿತಾಯದಲ್ಲಿ ಕೇವಲ 23,875.55 ರೂ.ಗಳನ್ನು(ಶೇ.36.4) ಸಾಲ ಮರುಪಾವತಿಗೆ ಬಳಸಿದೆ. 2023-24ರ ಹಣಕಾಸು ವರ್ಷದಲ್ಲಿ ರಾಜ್ಯದ ಹೊಣೆಗಾರಿಕೆಗಳು ಹಿಂದಿನ ವರ್ಷಕ್ಕಿಂತ ಶೇ.12.34ರಷ್ಟು ಹೆಚ್ಚಾಗಿವೆ ಎಂದು ವರದಿಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News