ಬಿಹಾರ | ಮಾಜಿ ಭೂಗತ ಪಾತಕಿ ಅನಂತ್ ಕುಮಾರ್ ಸಿಂಗ್ ಜೆಡಿಯು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
ಅನಂತ್ ಕುಮಾರ್ ಸಿಂಗ್ | Photo Credit : PTI
ಪಾಟ್ನಾ, ಅ. 15: ರಾಜಕಾರಣಿಯಾಗಿ ಬದಲಾದ ಭೂಗತ ಪಾತಕಿ ಅನಂತ್ ಕುಮಾರ್ ಸಿಂಗ್ ಬಿಹಾರದ ಮೊಕಾಮಾ ವಿಧಾನಸಭಾ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಫಿಡವಿಟ್ ಪ್ರಕಾರ ಅವರು 37.88 ಕೋ.ರೂ. ಸ್ಥಿರ ಹಾಗೂ ಚರ ಆಸ್ತಿಯನ್ನು ಹೊಂದಿದ್ದಾರೆ.
ಮುಂಬರುವ ವಿಧಾನ ಸಭಾ ಚುನಾವಣೆಗೆ ಜೆಡಿಯು ಅಧಿಕೃತವಾಗಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸುವ ಮುನ್ನ, ಸಿಂಗ್ ಅವರು ಮಂಗಳವಾರ ಚುನಾವಣಾ ಆಯುಕ್ತರಿಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಉನ್ನತ ನಾಯಕರಿಂದ ಜೆಡಿಯು ಚಿಹ್ನೆ ಸ್ವೀಕರಿಸಿದ ಬಳಿಕ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
2020ರ ವಿಧಾನ ಸಭಾ ಚುನಾವಣೆಯಲ್ಲಿ ಆರ್‌ಜೆಡಿ ಟಿಕೆಟ್‌ನಲ್ಲಿ ಮೊಕಾಮಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಂಗ್ ಅವರ ಪತ್ನಿ ನೀಲಮ್ ದೇವಿ ಅವರು ರಾಜ್ಯದಲ್ಲಿ ತನ್ನ ಬೆಂಬಲವನ್ನು ಎನ್‌ಡಿಎ ಸರಕಾರಕ್ಕೆ ಬದಲಾಯಿಸಿದ್ದಾರೆ.
ಮೊಕಾಮಾ ವಿಧಾನ ಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ ನವೆಂಬರ್ 6ರಂದು ನಡೆಯಲಿದೆ.
ಚುನಾವಣಾ ಅಧಿಕಾರಿಗಳಿಗೆ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡ ವಿಟ್‌ನಲ್ಲಿ ಸಿಂಗ್ 26.66 ಕೋ.ರೂ. ಸ್ಥಿರ ಆಸ್ತಿ ಹಾಗೂ 11.22 ಕೋ.ರೂ. ಚರ ಆಸ್ತಿಯನ್ನು ಘೋಷಿಸಿದ್ದಾರೆ.
ಅಫಿಡವಿಟ್ ಪ್ರಕಾರ ಸಿಂಗ್ ಅವರು 28 ಕ್ರಿಮಿನಲ್ ಪ್ರಕರಣಗಳನ್ನು ಕೂಡಾ ಎದುರಿಸುತ್ತಿದ್ದಾರೆ.