×
Ad

ಕ್ರಿಮಿನಲ್ ಪ್ರಕರಣದಲ್ಲಿ ಬಂಧನವಾದರೆ ಪ್ರಧಾನಿ, ಸಿಎಂ, ಸಚಿವರ ಪದಚ್ಯುತಿ : ಲೋಕಸಭೆಯಲ್ಲಿ ಮಸೂದೆ ಮಂಡಿಸಲು ಮುಂದಾದ ಕೇಂದ್ರ ಸರಕಾರ

"ಸಂವಿಧಾನವನ್ನು ಬದಲಾಯಿಸುವ ಯತ್ನ" ಎಂದ ವಿಪಕ್ಷಗಳು

Update: 2025-08-20 12:42 IST

ಲೋಕಸಭೆ (File Photo: PTI)

ಹೊಸದಿಲ್ಲಿ : ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ ಪದಚ್ಯುತಿಗೊಳಿಸಲು ಅನುವು ಮಾಡಿಕೊಡುವ ಮಸೂದೆಗಳನ್ನು ಬುಧವಾರ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರಕಾರ ಮುಂದಾಗಿದೆ. ಪ್ರಸ್ತಾವಿತ ಕಾನೂನು ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಮಂತ್ರಿಗಳನ್ನು ಒಳಗೊಳ್ಳುತ್ತದೆ.

ಇದಲ್ಲದೆ ಕೇಂದ್ರಾಡಳಿತ ಪ್ರದೇಶಗಳ ಸರಕಾರ (ತಿದ್ದುಪಡಿ) ಮಸೂದೆ 2025, ಸಂವಿಧಾನದ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ- 2025 ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್‌ವಿಂಗಡನೆ (ತಿದ್ದುಪಡಿ) ಮಸೂದೆ- 2025 ನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಪ್ರಸ್ತಾವನೆ ಮಂಡಿಸುವ ಸಾಧ್ಯತೆ ಇದೆ.

ಇಲ್ಲಿಯವರೆಗೆ ಸಂವಿಧಾನದ ಅಡಿಯಲ್ಲಿ ಶಿಕ್ಷೆಗೊಳಗಾದ ಸಾರ್ವಜನಿಕ ಜನಪ್ರತಿನಿಧಿಗಳನ್ನು ಮಾತ್ರ ಅಧಿಕಾರದಿಂದ ತೆಗೆದುಹಾಕಬಹುದಿತ್ತು. ಆದ್ದರಿಂದ ಪ್ರಮುಖ ಮಸೂದೆಗಳು ಸಾಂವಿಧಾನಿಕ ತಿದ್ದುಪಡಿ ಮಸೂದೆಗಳಾಗಿವೆ. ಸಂವಿಧಾನದ 75, 164 ಮತ್ತು 239ಎಎ ವಿಧಿಗಳನ್ನು ತಿದ್ದುಪಡಿ ಮಾಡುವ ಅವಶ್ಯಕತೆಯಿದೆ.

ಪ್ರಸ್ತಾವಿತ ಕಾನೂನು ಹೇಳುವಂತೆ, ಪ್ರಧಾನಿ, ಯಾವುದೇ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಚಿವರು ಬಂಧಿಸಲ್ಪಟ್ಟು ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ ಅವರು 31ನೇ ದಿನದೊಳಗೆ ರಾಜೀನಾಮೆ ನೀಡಬೇಕು ಅಥವಾ ಸ್ವಯಂಚಾಲಿತವಾಗಿ ಪದಚ್ಯುತಿಗೊಳಿಸಲಾಗುತ್ತದೆ.

ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಂಡಿಸಲು ಮುಂದಾಗಿರುವ ಮಸೂದೆಗಳಿಗೆ ಪ್ರತಿಪಕ್ಷಗಳ ನಾಯಕರು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದು ಸಂವಿಧಾನವನ್ನು ಬದಲಾಯಿಸುವ ಯತ್ನ ಎಂದು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, “ವಿರೋಧ ಪಕ್ಷದ ಭವಿಷ್ಯವಾಣಿಗಳು ನಿಜವಾಗಿದೆ. ಕೇವಲ 240 ಸಂಸದರನ್ನು ಹೊಂದಿರುವ ಬಿಜೆಪಿ ಸಂವಿಧಾನ ಬದಲಾಯಿಸುತ್ತಿದೆ. ಹೊಸ ಮಸೂದೆ ಒಕ್ಕೂಟ ವ್ಯವಸ್ಥೆ ಮತ್ತು ನ್ಯಾಯಾಂಗ ಎರಡನ್ನೂ ಮೀರಿದೆ. ಕೇಂದ್ರ ಸರಕಾರ ಈಡಿ, ಸಿಬಿಐ ಬಳಸಿಕೊಂಡು ಚುನಾಯಿತ ವಿರೋಧ ಪಕ್ಷದ ಮುಖ್ಯಮಂತ್ರಿಯನ್ನು ಸುಳ್ಳು ಆರೋಪಗಳ ಮೇಲೆ ಬಂಧಿಸಬಹುದು ಮತ್ತು ನ್ಯಾಯಾಲಯದಿಂದ ತಪ್ಪಿತಸ್ಥರೆಂದು ಸಾಬೀತಾಗದೆ ಅವರನ್ನು ವಜಾಗೊಳಿಸಬಹುದು” ಎಂದು ಆತಂಕವನ್ನು ವ್ತಕ್ತಪಡಿಸಿದ್ದಾರೆ.

ಟಿಎಂಸಿ ಸಂಸದ ಸಾಕೇತ್ ಗೋಖಲೆ ಈ ಕುರಿತು ಪ್ರತಿಕ್ರಿಯಿಸಿ, ಮತ ಕಳ್ಳತನ ಬಹಿರಂಗವಾದಾಗ ಮೋದಿ ಮತ್ತು ಅಮಿತ್ ಶಾ ಹೊಸ ತಂತ್ರಗಳನ್ನು ಹುಡುಕುತ್ತಿದ್ದಾರೆ. ಸಿಬಿಐ ಮತ್ತು ಈಡಿ ಬಿಜೆಪಿಗಾಗಿ ರಾಜ್ಯ ಸರಕಾರಗಳನ್ನು ನೇರವಾಗಿ ಉರುಳಿಸಲು ಅನುವು ಮಾಡಿಕೊಡುವ ಹೊಸ ಮಸೂದೆಯನ್ನು ಬುಧವಾರ ಮಂಡಿಸಲಾಗುತ್ತಿದೆ. ನ್ಯಾಯಾಲಯವು ಶಿಕ್ಷೆ ವಿಧಿಸಿದಾಗ ಮಾತ್ರ ಒಬ್ಬರು ವ್ಯಕ್ತಿ ಅಪರಾಧಿಯಾಗುತ್ತಾರೆ. ಅಲ್ಲಿಯವರೆಗೆ ಅವರು ಆರೋಪಿಯಾಗಿರುತ್ತಾರೆ. ಕೇವಲ ಆರೋಪದ ಮೇಲೆ ನೀವು ಮುಖ್ಯಮಂತ್ರಿ ಅಥವಾ ಸಚಿವರನ್ನು ಪದಚ್ಯುತಗೊಳಿಸಲು ಸಾಧ್ಯವಿಲ್ಲ. ಮೋದಿ ಮತ್ತು ಶಾ ಅವರ ಸಂಸ್ಥೆಗಳು ಬಂಧನ ಮಾಡಿದ ಮಾತ್ರಕ್ಕೆ ಅಪರಾಧಿಯೆಂದಲ್ಲ. ಕುತೂಹಲಕಾರಿ ಸಂಗತಿಯೆಂದರೆ ಕಳೆದ 11 ವರ್ಷಗಳಲ್ಲಿ ಬಿಜೆಪಿಯ ಯಾವುದೇ ಕೇಂದ್ರ ಅಥವಾರಾಜ್ಯ ಸಚಿವರ ಬಂಧನವಾಗಿಲ್ಲ. ಎಲ್ಲಾ ಬಂಧನಗಳು ವಿರೋಧ ಪಕ್ಷದ ನಾಯಕರದ್ದು ಮಾತ್ರ ಆಗಿದೆ ಎಂದು ಹೇಳಿದರು.

ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ಈ ಕುರಿತು ಪ್ರತಿಕ್ರಿಯಿಸಿ, ಗೃಹ ಸಚಿವ ಅಮಿತ್ ಶಾ ಅವರ ಮಸೂದೆಗಳು ರಾಹುಲ್ ಗಾಂಧಿಯವರ ಮತ ಅಧಿಕಾರ ಯಾತ್ರೆಯಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಹತಾಶೆಯ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ಇದೊಂದು ವಿಕೃತ ಚಕ್ರವ್ಯೂಹ, ಇಲ್ಲಿ ಬಂಧನಕ್ಕೆ ಸಂಬಂಧಪಟ್ಟ ಯಾವುದೇ ಮಾರ್ಗಸೂಚಿಗಳನ್ನು ಪಾಲಿಸಲಾಗುವುದಿಲ್ಲ. ವಿರೋಧ ಪಕ್ಷಗಳ ನಾಯಕರ ಬಂಧನಗಳು ಅತಿರೇಕವಾಗಿ ಹಾಗೂ ಅನಿಯಮಿತವಾಗಿ ನಡೆಯುತ್ತಿರುವಾಗ, ಹೊಸ ಪ್ರಸ್ತಾಪಿತ ಕಾನೂನು ಅನ್ವಯ, ಯಾರಾದರು ಮುಖ್ಯಮಂತ್ರಿ ಬಂಧಿತರಾದರೆ ಅವರನ್ನು ತಕ್ಷಣವೇ ಅಧಿಕಾರದಿಂದ ವಜಾಗೊಳಿಸಲಾಗುತ್ತದೆ. ವಿರೋಧ ಪಕ್ಷವನ್ನು ಅಸ್ಥಿರಗೊಳಿಸುವ ಅತ್ಯುತ್ತಮ ಮಾರ್ಗವಾಗಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ವಿರೋಧ ಪಕ್ಷದ ಮುಖ್ಯಮಂತ್ರಿಗಳನ್ನು ಬಂಧಿಸಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಲಾಗುತ್ತದೆ ಎಂದು ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಅಭಿಷೇಕ್ ಮನು ಸಿಂಘ್ವಿ ಕಳವಳ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News