ಕೇರಳ ಪಂಚಾಯತಿ ಚುನಾವಣೆ | ಮುನ್ನಾರ್ ನಿಂದ Sonia Gandhiಯನ್ನು ಕಣಕ್ಕಿಳಿಸಿದ BJP!
Photo Credit : indianexpress.com
ತಿರುವನಂತಪುರಂ: ಕೇರಳದ ಮುನ್ನಾರ್ ನಿಂದ ಸೋನಿಯಾ ಗಾಂಧಿ ಪಂಚಾಯತಿ ಚುನಾವಣೆಗಿಳಿದಿದ್ದಾರೆ! ಹೌದು, ಸೋನಿಯಾ ಗಾಂಧಿಯೇ ಮುನ್ನಾರ್ ನಿಂದ ಪಂಚಾಯತಿ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ!! ಇನ್ನೂ ಸ್ವಾರಸ್ಯಕರ ಸಂಗತಿಯೆಂದರೆ, ಅವರು ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ!!!
ಹಾಗಾದರೆ, ಕಾಂಗ್ರೆಸ್ ಪಕ್ಷದ ಅಧಿನಾಯಕಿಯಾದ ಸೋನಿಯಾ ಗಾಂಧಿಯೇ ಮುನ್ನಾರ್ ನಿಂದ ಪಂಚಾಯತಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆಯೆ?
ಸ್ವಲ್ಪ ತಡೆಯಿರಿ! ಕೇರಳದ ಗುಡ್ಡಗಾಡು ಪ್ರದೇಶವಾದ ಮುನ್ನಾರ್ ನ ನಲ್ಲತನ್ನಿ ವಾರ್ಡ್ ನಿಂದ (ವಾರ್ಡ್ ನಂ. 16) ಸೋನಿಯಾ ಗಾಂಧಿ ಎಂಬ ಹೆಸರಿನ ಮಹಿಳೆಯನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅವರು ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿಯಂತೂ ಅಲ್ಲ; ಬದಲಿಗೆ, ನಲ್ಲತನ್ನಿ ಕಲ್ಲರ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 34 ವರ್ಷದ ಸೋನಿಯಾ ಗಾಂಧಿ ಆಗಿದ್ದಾರೆ! ಇವರಿಬ್ಬರ ರಾಜಕೀಯ ಮತ್ತು ಮಾರ್ಗಗಳೆರಡೂ ವಿಭಿನ್ನವಾಗಿದೆ.
ಇದರ ಹಿಂದೆ ಒಂದು ಕುತೂಹಲಕಾರಿ ಕಥನವಿದೆ. ಸ್ಥಳೀಯ ಕೂಲಿ ಕಾರ್ಮಿಕ ಹಾಗೂ ಕಾಂಗ್ರೆಸ್ ನಾಯಕ ದಿ. ದುರೆ ರಾಜ್ ಎಂಬುವವರಿಗೆ ಹೆಣ್ಣು ಮಗುವೊಂದು ಜನಿಸಿತು. ಸೋನಿಯಾ ಗಾಂಧಿ ಬಗೆಗಿನ ಆರಾಧನೆ ಅಥವಾ ಬಹುಶಃ ಹೆಮ್ಮೆಯಿಂದ ಆ ನವಜಾತ ಶಿಶುವಿಗೆ ದುರೆ ರಾಜ್ ಅವರು ಸೋನಿಯಾ ಗಾಂಧಿಯವರ ಹೆಸರನ್ನೇ ನಾಮಕರಣ ಮಾಡಿದರು. ಆ ಮಗುವೇ ಇಂದು ಬೆಳೆದು, ಬಿಜೆಪಿ ಅಭ್ಯರ್ಥಿಯಾಗಿ ಪಂಚಾಯತಿ ಚುನಾವಣಾ ಕಣಕ್ಕಿಳಿದಿದೆ! ಇಲ್ಲಿಯವರೆಗೆ ಇಡುಕ್ಕಿಯ ಗುಡ್ಡಗಾಡಿನಲ್ಲಿ ಈ ಹೆಸರು ಚೇತೋಹಾರಿ ಕಾಕತಾಳೀಯ ಮಾತ್ರವಾಗಿತ್ತು.
ಆದರೆ, ಬಿಜೆಪಿಯ ಪಂಚಾಯತಿ ಪ್ರಧಾನ ಕಾರ್ಯದರ್ಶಿ ಸುಭಾಶ್ ರನ್ನು ಸೋನಿಯಾ ಗಾಂಧಿ ವರಿಸಿದ ನಂತರ, ಅವರ ಜೀವನ ಮಾರ್ಗವೇ ಬದಲಾಯಿತು. ಈ ಹಿಂದೆ ಹಳೆಯ ಮುನ್ನಾರ್ ಮುಲಕ್ಕಾಡ್ ಕ್ಷೇತ್ರದಿಂದ ಉಪ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ಸುಭಾಶ್ ರನ್ನು ವಿವಾಹವಾದ ಬಳಿಕ ಸೋನಿಯಾ ಗಾಂಧಿ ಕೂಡಾ ಬಿಜೆಪಿಯ ತೆಕ್ಕೆಗೆ ಜಾರಿದರು. ಆ ಮೂಲಕ, ತನ್ನ ಹೆಸರಿನ ಪರಂಪರೆಯನ್ನು ರಾಜಕೀಯ ಚದುರಂಗದಾಟದಲ್ಲಿ ಇದೀಗ ಪಣಕ್ಕೊಡ್ಡಿದ್ದಾರೆ.
ಇದೀಗ ಅವರು ಚುನಾವಣಾ ರಾಜಕಾರಣಕ್ಕೆ ಕಾಲಿಟ್ಟಿರುವುದರಿಂದ, ಅವರ ಬಗೆಗಿನ ಕುತೂಹಲವೂ ಗರಿಗೆದರಿದೆ. ಅವರ ಎದುರಾಳಿಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಜುಳಾ ರಮೇಶ್ ಹಾಗೂ ಸಿಪಿಎಂ ಅಭ್ಯರ್ಥಿ ವಲಾರ್ಮತಿ ಅಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕಿ ಸೋನಿಯಾ ಗಾಂಧಿಯ ಹೆಸರನ್ನೇ ಹೊಂದಿರುವ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ, ಇದೀಗ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧವೇ ಸೆಣಸಬೇಕಾಗಿ ಬಂದಿದೆ.