ಅಮಿತ್ ಶಾ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ : ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಬಿಜೆಪಿ ದೂರು
Photo | NDTV
ಹೊಸದಿಲ್ಲಿ : ಅಮಿತ್ ಶಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಬಿಜೆಪಿ ದೂರು ನೀಡಿದೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು "ಅವರ ತಲೆ ಕತ್ತರಿಸಬೇಕು" ಎಂದು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಬಿಜೆಪಿ ಈ ಹೇಳಿಕೆಯನ್ನು ಅಸಹ್ಯಕರ ಮತ್ತು ದ್ವೇಷಪೂರಿತ ಎಂದು ಖಂಡಿಸಿದೆ. ಈ ಕುರಿತು ಕೃಷ್ಣನಗರದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹುವಾ ಮೊಯಿತ್ರಾ, “ಅಮಿತ್ ಶಾ ಅವರ ತಲೆಯನ್ನು ಕತ್ತರಿಸಿ ಮೇಜಿನ ಮೇಲೆ ಇಡಬೇಕು” ಎಂದು ಹೇಳಿರುವುದಾಗಿ ವರದಿಯಾಗಿದೆ.
“ಅವರು ಪದೇ ಪದೇ ಒಳನುಸುಳುಕೋರರ ಕುರಿತು ಮಾತನಾಡುತ್ತಾರೆ. ಆದರೆ ದೇಶದ ಗಡಿಯನ್ನು ರಕ್ಷಿಸುವುದು ಕೇಂದ್ರ ಗೃಹ ಸಚಿವಾಲಯದ ಹೊಣೆಯಾಗಿದೆ. ಅಮಿತ್ ಶಾ ಈ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಳನುಸುಳುವಿಕೆಗೆ ಟಿಎಂಸಿ ಸರಕಾರವನ್ನು ದೂಷಿಸಲು ಸಾಧ್ಯವಿಲ್ಲ” ಎಂದು ಮಹುವಾ ಮೊಯಿತ್ರಾ ಹೇಳಿರುವ ಬಗ್ಗೆ ವರದಿಯಾಗಿದೆ.