×
Ad

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಪಟ್ಟಿಯಲ್ಲಿ ಪ್ಲಾಸ್ಟಿಕ್ ಹೂವನ್ನು ಯಾಕೆ ಸೇರಿಸಿಲ್ಲ? : ಕೇಂದ್ರ ಸರಕಾರಕ್ಕೆ ಬಾಂಬೆ ಹೈಕೋರ್ಟ್ ಪ್ರಶ್ನೆ

Update: 2025-02-12 21:21 IST

ಸಾಂದರ್ಭಿಕ ಚಿತ್ರ 

ಮುಂಬೈ: ಕೇಂದ್ರ ಸರಕಾರ ನಿಷೇಧಿಸಿದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಪಟ್ಟಿಯಲ್ಲಿ ಪ್ಲಾಸ್ಟಿಕ್ ಹೂವುಗಳನ್ನು ಯಾಕೆ ಸೇರಿಸಿಲ್ಲ ಎಂದು ಬಾಂಬೆ ಉಚ್ಚ ನ್ಯಾಯಾಲಯ ಬುಧವಾರ ಪ್ರಶ್ನಿಸಿದೆ.

ಪ್ಲಾಸ್ಟಿಕ್ ಹೂವುಗಳನ್ನು ಮರು ಬಳಕೆ ಮಾಡಬಹುದು ಅಥವಾ ಅವು ಜೈವಿಕ ವಿಭಜನೀಯ ಎಂದು ಕೇಂದ್ರ ಸರಕಾರ ಭಾವಿಸಿದೆಯೇ ಎಂದು ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರ ವಿಭಾಗೀಯ ಪೀಠ ಪ್ರಶ್ನಿಸಿತು.

ಪ್ಲಾಸ್ಟಿಕ್ ಹೂವುಗಳ ಬಳಕೆಯನ್ನು ನಿಷೇಧಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಗ್ರೋವರ್ರ್ಸ್‌ ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು.

‘‘ಪ್ಲಾಸ್ಟಿಕ್ ಹೂವುಗಳನ್ನು ಮರು ಬಳಕೆ ಮಾಡಬಹುದು ಅಥವಾ ಅವು ಜೈವಿಕ ವಿಭಜನೀಯ ಎಂದು ಕೇಂದ್ರ ಸರಕಾರಕ್ಕೆ ಖಾತರಿ ಇದೆಯೇ? ಅವು ತುಂಬಾ ದುರ್ಬಲವಾಗಿವೆ. ಅದನ್ನು ಮರು ಬಳಕೆ ಮಾಡಬಹುದೇ?’’ ಎಂದು ಪ್ಲಾಸ್ಟಿಕ್ ಹೂವುಗಳು ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಇಲ್ಲ ಎಂದು ಪ್ರತಿಪಾದಿಸುವ ಕೇಂದ್ರ ಸರಕಾರದ ಅಫಿಡಾವಿಟ್ ಅನ್ನು ಉಲ್ಲೇಖಿಸಿ ಅದು ಹೇಳಿತು.

ಮರು ಬಳಕೆಗೆ ಸಾಧ್ಯವಾಗದ ಅಥವಾ ಜೈವಿಕ ವಿಭಜನೀಯವಲ್ಲದ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸರಕಾರ ಜಾರಿಗೊಳಿಸಿದ ಅಧಿಸೂಚನೆಯನ್ನು ಪೀಠ ಉಲ್ಲೇಖಿಸಿತು. ‘‘ಈ ಪಟ್ಟಿಯಲ್ಲಿ ಪ್ಲಾಸ್ಟಿಕ್ ಹೂವುಗಳನ್ನು ಸೇರಿಸಲು ಸಾಧ್ಯವಿಲ್ಲ ಎಂದು ನಿಮಗೆ ಖಾತರಿ ಇದೆಯೇ?’’ ಎಂದು ಪೀಠ ಪ್ರಶ್ನಿಸಿತು.

ಕೇಂದ್ರ ಸರಕಾರದ ಅಭಿಪ್ರಾಯಕ್ಕೆ ಪ್ರತಿಕ್ರಿಯೆಯಾಗಿ ಎರಡು ವಾರಗಳ ಒಳಗೆ ಅಫಿಡಾವಿಟ್ ಸಲ್ಲಿಸುವಂತೆ ಅರ್ಜಿದಾರ ಸಂಸ್ಥೆಗೆ ನ್ಯಾಯಾಲಯ ನಿರ್ದೇಶಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News