ಅನಗತ್ಯ ಗರ್ಭವನ್ನು ಮುಂದುವರಿಸುವಂತೆ ಲೈಂಗಿಕ ಸಂತ್ರಸ್ತೆಗೆ ಒತ್ತಾಯಿಸುವಂತಿಲ್ಲ: ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್ | PC : PTI
ಮುಂಬೈ: ಲೈಂಗಿಕ ದೌರ್ಜನ್ಯದ ಸಂತ್ರಸ್ತೆಗೆ ತನ್ನ ಅನಗತ್ಯ ಗರ್ಭವನ್ನು ಮುಂದುವರಿಸಲು ಬಲವಂತಪಡಿಸುವಂತಿಲ್ಲ ಎಂದು ಬಾಂಬೆ ಉಚ್ಛ ನ್ಯಾಯಾಲಯ ಹೇಳಿದೆ.
ವೈದ್ಯಕೀಯ ತಜ್ಞರು ಪ್ರತಿಕೂಲ ವರದಿಯ ಹೊರತಾಗಿಯೂ ಆಕೆಯ 28 ವಾರಗಳ ಗರ್ಭವನ್ನು ಗರ್ಭಪಾತ ಮಾಡಿಸಿಕೊಳ್ಳಲು 12 ವರ್ಷದ ಬಾಲಕಿಗೆ ಅನುಮತಿ ನೀಡಿದ ಸಂದರ್ಭ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಆಕೆಯ ಇಚ್ಛೆಗೆ ವಿರುದ್ಧವಾಗಿ ಮಗುವಿಗೆ ಜನ್ಮ ನೀಡುವಂತೆ ಬಲವಂತಪಡಿಸಿದರೆ, ನ್ಯಾಯಾಲಯ ಆಕೆಯ ಜೀವನದ ಹಾದಿಯನ್ನು ನಿರ್ಧರಿಸುವ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ ಎಂದು ಅದು ಹೇಳಿದೆ.
ಬಾಲಕಿಯನ್ನು ತಪಾಸಣೆಗೆ ಒಳಪಡಿಸಿದ ಬಳಿಕ ವೈದ್ಯಕೀಯ ಮಂಡಳಿ, ಬಾಲಕಿಯ ಪ್ರಾಯ ಹಾಗೂ ಭ್ರೂಣದ ಬೆಳವಣಿಗೆಯ ಹಂತವನ್ನು ಪರಿಗಣಿಸಿದರೆ, ಈ ಗರ್ಭಪಾತದ ಪ್ರಕ್ರಿಯೆ ಅತ್ಯಂತ ಅಪಾಯಕಾರಿ ಎಂದು ಅಭಿಪ್ರಾಯಿಸಿತ್ತು.
ನ್ಯಾಯಮೂರ್ತಿಗಳಾದ ನಿತಿನ್ ಸಾಂಬ್ರೆ ಹಾಗೂ ಸಚಿನ್ ದೇಶಮುಖ್ ಅವರನ್ನು ಒಳಗೊಂಡ ಪೀಠ, ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಜೂನ್ 17ರಂದು ತೀರ್ಪು ನೀಡಿತು.
‘‘ಸಂತ್ರಸ್ತೆಗೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಗರ್ಭವನ್ನು ಮುಂದುವರಿಸುವಂತೆ ಈ ನ್ಯಾಯಾಲಯ ಬಲವಂತಪಡಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ, ಆಕೆಯ ತತ್‌ಕ್ಷಣದ ಹಾಗೂ ದೀರ್ಘಕಾಲೀನ ಜೀವನದ ದಾರಿಯನ್ನು ನಿರ್ಧರಿಸುವ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ’’ ಎಂದು ಉಚ್ಛ ನ್ಯಾಯಾಲಯ ಹೇಳಿದೆ.