ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ: ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್
ಮುಂಬೈ: ನವೆಂಬರ್ 20, 2024ರಂದು ನಡೆದಿದ್ದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಪ್ರಮಾಣದ ಅಕ್ರಮಗಳು ನಡೆದಿವೆ, ವಿಶೇಷವಾಗಿ ಸಂಜೆ 6 ಗಂಟೆಯ ನಂತರ ಮತದಾನದ ಪ್ರಮಾಣದಲ್ಲಿ ಅಸಹಜವಾಗಿ ಏರಿಕೆಯಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಬುಧವಾರ ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ ಮುಂಬೈ ನಿವಾಸಿ ಚೇತನ್ ಚಂದ್ರಕಾಂತ್ ಅಹಿರೆ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ನ್ಯಾ. ಜಿ.ಎಸ್.ಕುಲಕರ್ಣಿ ಹಾಗೂ ನ್ಯಾ. ಆರಿಫ್ ಡಾಕ್ಟರ್ ಅವರನ್ನೊಳಗೊಂಡಿದ್ದ ನ್ಯಾಯಪೀಠ ನಿರಾಕರಿಸಿತು.
ಅರ್ಜಿದಾರರು ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಾರೆ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತಾದರೂ, ಅವರ ವಿರುದ್ಧ ದಂಡ ಹೇರುವುದರಿಂದ ದೂರ ಉಳಿಯಿತು.
ಚುನಾವಣಾ ಪ್ರಕ್ರಿಯೆಗಳಲ್ಲಿ ಉಲ್ಲಂಘನೆಯಾಗಿರುವುದರಿಂದ ರಾಜ್ಯದಾದ್ಯಂತ ನಡೆದ 288 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ತಡೆಹಿಡಿಯಲಾಗಿದೆ ಎಂದು ಘೋಷಿಸಬೇಕು ಎಂದು ಕೋರಿ ಅರ್ಜಿದಾರರಾದ ಚೇತನ್ ಚಂದ್ರಕಾಂತ್ ಅಹಿರೆ ನ್ಯಾಯಾಲಯದ ಮೆಟ್ಟಿಲೇರಿದ್ದರು.