×
Ad

ವಿಚ್ಛೇದನ ಪ್ರಕರಣದಲ್ಲಿ ಮಗುವಿನ ಡಿ ಎನ್ ಎ ಪರೀಕ್ಷೆಯನ್ನು ತಡೆದ ಬಾಂಬೆ ಹೈಕೋರ್ಟ್

Update: 2025-07-09 21:58 IST

PC : freepik.com

ಮುಂಬೈ: ಬೇರ್ಪಟ್ಟಿರುವ ದಂಪತಿಗೆ 2013ರಲ್ಲಿ ಜನಿಸಿದ್ದ ಮಗುವಿನ ಕಾನೂನುಬದ್ಧತೆಯನ್ನು ನಿರ್ಧರಿಸಲು ಡಿಎನ್ಎ ಪರೀಕ್ಷೆಗೆ ನಿರ್ದೇಶನ ನೀಡಿದ್ದ ನಾಗ್ಪುರ ಕುಟುಂಬ ನ್ಯಾಯಾಲಯದ 2020ರ ಆದೇಶವನ್ನು ಬಾಂಬೆ ಉಚ್ಚ ನ್ಯಾಯಾಲಯದ ನಾಗ್ಪುರ ಪೀಠವು ತಳ್ಳಿಹಾಕಿದೆ.

ಡಿಎನ್ಎ ಪರೀಕ್ಷೆಗೆ ಪತಿಯ ಮನವಿಯನ್ನು ಪುರಸ್ಕರಿಸಿದ್ದ ಕುಟುಂಬ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಮಹಿಳೆ ಮತ್ತು ಮಗು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ.ಆರ್.ಎಂ.ಜೋಶಿಯವರು ಜು.1ರಂದು ತೀರ್ಪನ್ನು ಹೊರಡಿಸಿದ್ದಾರೆ.

ಮನವಿಯನ್ನು ಪುರಸ್ಕರಿಸುವ ಮೂಲಕ ಕುಟುಂಬ ನ್ಯಾಯಾಲಯವು ವಾಸ್ತವಾಂಶಗಳನ್ನು ಪರಿಗಣಿಸುವಲ್ಲಿ ಮತ್ತು ಕಾನೂನಾತ್ಮಕವಾಗಿ ತಪ್ಪು ಮಾಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ ಉಚ್ಚ ನ್ಯಾಯಾಲಯವು,ಪತಿಯು ಯಾವುದೇ ಔಪಚಾರಿಕ ಮನವಿಗಳಲ್ಲಿ ಪಿತೃತ್ವವನ್ನು ಎಂದೂ ನಿರಾಕರಿಸಿರಲಿಲ್ಲ ಎಂದು ಬೆಟ್ಟು ಮಾಡಿತು.

ದಂಪತಿ ಡಿ.18,2011ರಂದು ವಿವಾಹವಾಗಿದ್ದರು ಮತ್ತು ಜ.2013ರಲ್ಲಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಪತ್ನಿ ಗಂಡನ ಮನೆಯನ್ನು ತೊರೆದಿದ್ದಳು. ಜು.2013ರಲ್ಲಿ ಮಗು ಜನಿಸಿತ್ತು.

ನಂತರ ಪತಿ ಪತ್ನಿಯ ವಿರುದ್ಧ ವ್ಯಭಿಚಾರ, ಕ್ರೌರ್ಯ ಮತ್ತು ತನ್ನನ್ನು ತೊರೆದು ಹೋಗಿರುವ ಆರೋಪವನ್ನು ಹೊರಿಸಿ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದ. ಆತ ಪ್ರಾರಂಭದಲ್ಲಿ ಮಗುವಿನ ಪಿತೃತ್ವವನ್ನು ಪ್ರಶ್ನಿಸಿರಲಿಲ್ಲ. 2020ರಲ್ಲಿ ವಿಚಾರಣೆ ಸಂದರ್ಭದಲ್ಲಿ ಆತ ಡಿಎನ್ಎ ಪರೀಕ್ಷೆಗೆ ಕೋರಿಕೊಂಡಿದ್ದು, ಅದನ್ನು ಕುಟುಂಬ ನ್ಯಾಯಾಲಯವು ಪುರಸ್ಕರಿಸಿತ್ತು.

ಕುಟುಂಬ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ನ್ಯಾ.ಜೋಶಿಯವರು, ಪತಿಯು ತಾನು ಮಗುವಿನ ತಂದೆಯಲ್ಲ ಎಂದು ತಕರಾರು ಎತ್ತದಿದ್ದರೆ ಮತ್ತು ಪತ್ನಿಯೊಂದಿಗೆ ಸಂಪರ್ಕಕ್ಕೆ ತನಗೆ ಅವಕಾಶವಿರಲಿಲ್ಲ ಎಂಬ ನಿರ್ದಿಷ್ಟ ಪ್ರಕರಣವನ್ನು ರೂಪಿಸದಿದ್ದರೆ ಮಗುವಿನ ಪಿತೃತ್ವವನ್ನು ನಿರ್ಧರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News