×
Ad

ಹಿಂದುಯೇತರರ ಮನೆಗೆ ಭೇಟಿ ನೀಡುವ ಹೆಣ್ಣುಮಕ್ಕಳ ಕಾಲು ಮುರಿಯಿರಿ : ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್

Update: 2025-10-19 21:44 IST

Photo: Ndtv

ಭೋಪಾಲ್,ಅ.19: ಹೆಣ್ಣುಮಕ್ಕಳು ಹಿಂದುಯೇತರರ ಮನೆಗಳಿಗೆ ಹೋಗದಂತೆ ಅವರನ್ನು ಪೋಷಕರು ತಡೆಯಬೇಕು. ಒಂದು ವೇಳೆ ಅವರು ಒಪ್ಪದೇ ಇದ್ದಲ್ಲಿ ಅವರ ಕಾಲುಗಳನ್ನು ಮುರಿದುಹಾಕಿ ಎಂದು ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿರುವುದು ಭಾರೀ ವಿವಾದಕ್ಕೆ ಗ್ರಾಸವಾಗಿದೆ. ಪ್ರಜ್ಞಾಸಿಂಗ್ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಬಿಜೆಪಿಯು ದ್ವೇಷವನ್ನು ಹರಡುತ್ತಿದೆಯೆಂದು ಆಪಾದಿಸಿದೆ.

ಈ ತಿಂಗಳ ಆರಂಭದಲ್ಲಿ ಭೋಪಾಲದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಜ್ಞಾ ಸಿಂಗ್ ಅವರು, ಒಂದು ವೇಳೆ ಪುತ್ರಿಯರು ಪಾಲಕರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅವರನ್ನು ದೈಹಿಕವಾಗಿ ದಂಡಿಸಬೇಕೆಂದು ಕರೆ ನೀಡಿದ್ದರು.

‘‘ಒಂದು ವೇಳೆ ನಮ್ಮ ಪುತ್ರಿಯರು ನಮಗೆ ವಿಧೇಯರಾಗಿ ನಡೆದುಕೊಳ್ಳದಿದ್ದಲ್ಲಿ, ಆಕೆ ಹಿಂದುಯೇತರರ ಮನೆಗೆ ಹೋದಲ್ಲಿ ನಿಮ್ಮ ಮನಸ್ಸನ್ನು ಗಟ್ಟಿ ಮಾಡಿಕೊಂಡು, ಆಕೆಯ ಕಾಲುಗಳನ್ನು ಮುರಿಯುವಂತೆ ಮಾಡಿರಿ. ಮೌಲ್ಯಗಳನ್ನು ಪಾಲಿಸದೆ ಇದ್ದವರು ಹಾಗೂ ಅವರ ಪಾಲಕರ ಮಾತುಗಳನ್ನು ಕೇಳದೆ ಇದ್ದವರಿಗೆ ಶಿಕ್ಷೆಯಾಗಲೇಬೇಕು. ಅವರ ಒಳಿತಿಗಾಗಿ ನೀವು ನಿಮ್ಮ ಮಕ್ಕಳಿಗೆ ಹೊಡೆಯಬೇಕಿದ್ದಲ್ಲಿ, ಹಿಂದೇಟುಹಾಕಬೇಡಿ. ತಮ್ಮ ಮಕ್ಕಳ ಉತ್ತಮ ಭವಿಷ್ಯ ದೃಷ್ಟಿಯಿಂದ ಪಾಲಕರು ಈ ಕ್ರಮಗಳನ್ನು ಕೈಗೊಳ್ಳುವುದರಿಂದ ಅವರು ತಮ್ಮ ಮಕ್ಕಳು ತುಂಡುತುಂಡಾಗಿ ಕತ್ತರಿಸಲ್ಪಟ್ಟು ಸಾವನ್ನಪ್ಪದಂತೆ ನೋಡಿಕೊಳ್ಳುತ್ತಾರೆ’’ ಎಂದು ಪ್ರಜ್ಞಾ ಸಿಂಗ್ ಅವರು ಕಾರ್ಯಕ್ರಮದಲ್ಲಿ ಹೇಳಿದ್ದರು. ಈ ಭಾಷಣದ ವೀಡಿಯೊವನ್ನು ಅವರು ತನ್ನ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಬಾರೀ ವೈರಲ್ ಆಗಿದೆ.

‘‘ಮೌಲ್ಯಗಳನ್ನು ಅನುಸರಿಸದ, ಪಾಲಕರ ಮಾತು ಕೇಳದ, ಹಿರಿಯರನ್ನು ಗೌರವಿಸದ ಹಾಗೂ ಮನೆಯಿಂದ ಓಡಿಹೋಗಲು ಸಿದ್ಧವಿರುವಂತಹ ಹೆಣ್ಣುಮಕ್ಕಳ ಬಗ್ಗೆ ಕಟ್ಟುನಿಟ್ಟಿನ ನಿಗಾವಿರಿಸಿ. ಅವರನ್ನು ಮನೆಯಿಂದ ಹೊರಹೋಗಲು ಬಿಡದಿರಿ. ಅವರಿಗೆ ಹೊಡೆದು, ಬುದ್ದಿವಾದ ಹೇಳಿ. ಇಲ್ಲವೇ, ಅವರನ್ನು ಸಮಾಧಾನ ಪಡಿಸಿ, ಪ್ರೀತಿಸುತ್ತಾ ಅಥವಾ ಬೈದು ನಿಲ್ಲಿಸಿ ಎಂದು ಪ್ರಜ್ಞಾಸಿಂಗ್ ಹೇಳಿದ್ದರು.

ಥಾಕೂರ್ ಅವರು ದ್ವೇಷದ ಭಾಷಣಕ್ಕೆ ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಮತಾಂತರದ ಕೇವಲ ಏಳು ಪ್ರಕರಣಗಳಷ್ಟೇ ವರದಿಯಾಗಿದ್ದು, ಅವುಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಿದೆ. ಹೀಗಿರುವಾಗ ಯಾಕೆ ದ್ವೇಷ ಹಾಗೂ ಗದ್ದಲವನ್ನು ಹರಡಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News