ಮಸೂದೆಗಳಿಗೆ ಅಂಕಿತ ಹಾಕಲು ಕಾಲಮಿತಿ ನಿಗದಿಯಿಂದ ಸಾಂವಿಧಾನಿಕ ವ್ಯವಸ್ಥೆಗೆ ಧಕ್ಕೆ: ಕೇಂದ್ರ ಸರ್ಕಾರ
ಸುಪ್ರೀಂಕೋರ್ಟ್‌ಗೆ ಲಿಖಿತ ಅಭಿಪ್ರಾಯ ಸಲ್ಲಿಕೆ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ, ಆ.16: ರಾಜ್ಯ ವಿಧಾನಸಭೆಗಳಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ರಾಜ್ಯಪಾಲರು, ರಾಷ್ಟ್ರಪತಿಯವರು ನಿಗದಿತ ಕಾಲಮಿತಿಯೊಳಗೆ ಅಂಕಿತ ಹಾಕಬೇಕೆಂದು ಒತ್ತಾಯಿಸುವುದರಿಂದ ಸಂವಿಧಾನಿಕ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ನೀಡಿರುವ ಲಿಖಿತ ಅಭಿಪ್ರಾಯದಲ್ಲಿ ತಿಳಿಸಿದೆ.
ಸಂವಿಧಾನದ 143(1)ನೇ ವಿಧಿಯಡಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಳಿದ 14 ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡುವ ಸಲುವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಮುನ್ನ, ಕೇಂದ್ರ ಸರ್ಕಾರವು ತನ್ನ ಅಭಿಪ್ರಾಯವನ್ನು ಹೇಳಿದೆ. ಈ ಸಂಬಂಧ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠವು ಎರಡು ವಾರಗಳ ಹಿಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಲಿಖಿತ ಅಭಿಪ್ರಾಯ ಸಲ್ಲಿಸಲು ಸೂಚನೆ ನೀಡಿತ್ತು.
"ಸಂವಿಧಾನದ ಯಾವುದೇ ಒಂದು ಅಂಗದ ಕಾರ್ಯವನ್ನು ಇನ್ನೊಂದು ಅಂಗವು ನಿರ್ವಹಿಸಲು ಸಾಧ್ಯವಿಲ್ಲ. ಯಾವುದೇ ಶಾಖೆಯು ತನ್ನ ಅಧಿಕಾರವನ್ನು ಮೀರಿ ವರ್ತಿಸಿದರೆ, ಅದು ಸಾಂವಿಧಾನಿಕ ವ್ಯವಸ್ಥೆಯ ಮೂಲ ತತ್ವಗಳಿಗೆ ವಿರುದ್ಧವಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಇನ್ನೊಂದು ಅಂಗದ ಕಾರ್ಯವೈಖರಿಯನ್ನು ಪ್ರಶ್ನಿಸುವುದರಿಂದ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಉಂಟಾಗಲಿದೆ" ಎಂದು ಕೇಂದ್ರವು ತಿಳಿಸಿದೆ.
ಈ ಪ್ರಕರಣದ ವಿಚಾರಣೆ ಆಗಸ್ಟ್ 19ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಆರಂಭವಾಗಲಿದೆ.