ಕೇಪ್ ಟೌನ್ ಟೆಸ್ಟ್ ಪಂದ್ಯ: 222 ರನ್ ಜೊತೆಯಾಟದೊಂದಿಗೆ ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ್ದ ತೆಂಡೂಲ್ಕರ್ ಮತ್ತು ಅಝರುದ್ದೀನ್: ಒಂದು ಮೆಲುಕು..
ಸಚಿನ್ ತೆಂಡೂಲ್ಕರ್ | Photo: scroll.in
ಹೊಸದಿಲ್ಲಿ: ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳ ನಡುವೆ ಪ್ರಥಮ ಟೆಸ್ಟ್ ಪಂದ್ಯ ಪ್ರಾರಂಭವಾಗಲಿದೆ. ಇದರ ಬೆನ್ನಿಗೇ 1996ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಚಿನ್ ತೆಂಡೂಲ್ಕರ್ ನೇತೃತ್ವದ ತಂಡವು ಕೇಪ್ ಟೌನ್ ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಅಝರುದ್ದೀನ್ ಜೋಡಿಯು ದಕ್ಷಿಣ ಆಫ್ರಿಕಾ ತಂಡದ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ್ದ ನೆನಪು ಮುನ್ನೆಲೆಗೆ ಬಂದಿದೆ.
ತಮ್ಮ ಚೊಚ್ಚಲ ನಾಯಕತ್ವದಲ್ಲಿ ಸಚಿನ್ ತೆಂಡೂಲ್ಕರ್ ಅವರು ಅನನುಭವಿ, ಆದರೆ, ಅಪಾರ ಪ್ರತಿಭೆಯಿದ್ದ ಮಧ್ಯಮ ಕ್ರಮಾಂಕದ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದರು. ಆ ತಂಡದಲ್ಲಿ ವಿ.ವಿ.ಎಸ್.ಲಕ್ಷ್ಮಣ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ರಂಥ ಅನನುಭವ ಪ್ರತಿಭಾವಂತ ಮಧ್ಯಮ ಕ್ರಮಾಂಕದ ಆಟಗಾರರಿದ್ದರೆ, ನಿಕಟಪೂರ್ವ ನಾಯಕರಾಗಿದ್ದ ಅಝರುದ್ದೀನ್ ಮಾತ್ರ ಅನುಭವಿ ಮಧ್ಯಮ ಕ್ರಮಾಂಕದ ಆಟಗಾರರಾಗಿದ್ದರು.
ಡರ್ಬಾನ್ ನಲ್ಲಿ ನಡೆದಿದ್ದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಪಡೆಯು ಅಲನ್ ಡೊನಾಲ್ಡ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡದ ಬೌಲರ್ ಗಳೆದುರು ಧೂಳೀಪಟವಾಗಿತ್ತು. ಆ ಪಂದ್ಯದಲ್ಲಿ ಭಾರತ ತಂಡದ ಬ್ಯಾಟರ್ ಗಳು ಎರಡೂ ಇನಿಂಗ್ಸ್ ಗಳಲ್ಲಿ ಕ್ರಮವಾಗಿ 100 ಮತ್ತು 66 ರನ್ ಗಳಿಸಲಷ್ಟೆ ಶಕ್ತವಾಗಿತ್ತು. ಆ ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡವು 328 ರನ್ ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿತ್ತು. ಇದರಿಂದ ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ ತಂಡಕ್ಕೆ ಭಾರಿ ಮುಖಭಂಗವಾಗಿತ್ತು.
ಇದರ ಬೆನ್ನಿಗೇ ಕೇಪ್ ಟೌನ್ ನಲ್ಲಿ ನಡೆದಿದ್ದ ಎರಡನೆ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗಿಗಳಾದ ಜಾವಗಲ್ ಶ್ರೀನಾಥ್ ಹಾಗೂ ವೆಂಕಟೇಶ್ ಪ್ರಸಾದ್ ಉತ್ತಮ ಬೌಲಿಂಗ್ ದಾಳಿ ನಡೆಸಿದರೂ, ದಕ್ಷಿಣ ಆಫ್ರಿಕಾ ತಂಡವು 7 ವಿಕೆಟ್ ಗಳ ನಷ್ಟಕ್ಕೆ ಬೃಹತ್ 529 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆ ಪಂದ್ಯದಲ್ಲಿ ಗ್ಯಾರಿ ಕರ್ಸ್ಟೆನ್, ಬ್ರಿಯಾನ್ ಮ್ಯಾಕ್ ಮಿಲನ್ ಹಾಗೂ ಲ್ಯಾನ್ಸ್ ಕ್ಲೂಸನರ್ ಶತಕ ಗಳಿಸಿದ್ದರು.
ನಂತರ ಬ್ಯಾಟಿಂಗ್ ಗೆ ಇಳಿದಿದ್ದ ಭಾರತ ತಂಡವು ಕೇವಲ 58 ರನ್ ಗಳಿಗೆ 5 ವಿಕೆಟ್ ಗಳನ್ನು ಕಳೆದುಕೊಂಡು, ಮತ್ತೆ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಸಚಿನ್ ತೆಂಡೂಲ್ಕರ್ ತಮ್ಮ ತಂಡದ ಕುಸಿತವನ್ನು ನೋಡುತ್ತಾ, ಅಸಹಾಯಕರಾಗಿ ಕ್ರೀಸಿನಲ್ಲಿದ್ದರು. ಆ ಸಂದರ್ಭದಲ್ಲಿ ಕ್ರೀಸಿಗೆ ಆಗಮಿಸಿದ ಅಝರುದ್ದೀನ್, ತಮ್ಮ ಅನುಭವ ಹಾಗೂ ಬ್ಯಾಟಿಂಗ್ ಕೌಶಲದಿಂದ ಭಾರತ ತಂಡಕ್ಕೆ ಜೀವ ತುಂಬಿದರು.
ಆ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಅಝರುದ್ದೀನ್ ಜೋಡಿಯು ಬರೋಬ್ಬರಿ 222 ರನ್ ಗಳ ಜೊತೆಯಾಟವಾಡಿತು. ಅಝರುದ್ದೀನ್ ತಮ್ಮ ಬ್ಯಾಟಿಂಗ್ ಖಾತೆಯಲ್ಲಿದ್ದ ಎಲ್ಲ ಬಗೆಯ ಹೊಡೆತಗಳನ್ನು ಹೊಡೆದು ಶತಕ (115) ಗಳಿಸಿದರು. ಅಝರುದ್ದೀನ್ ಆಟದಿಂದ ಸ್ಫೂರ್ತಿಗೊಂಡಂತೆ ಬ್ಯಾಟಿಂಗ್ ಪ್ರದರ್ಶಿಸಿದ್ದ ಸಚಿನ್ ತೆಂಡೂಲ್ಕರ್ ಕೂಡಾ 169 ರನ್ ಗಳಿಸುವ ಮೂಲಕ ಅಮೋಘ ಶತಕ ಗಳಿಸಿದ್ದರು. ಆ ಪಂದ್ಯದಲ್ಲೂ ಭಾರತ ತಂಡವು 282 ರನ್ ಗಳ ಅಂತರದಿಂದ ಪರಾಭವಗೊಂಡರೂ, ಸಚಿನ್ ತೆಂಡೂಲ್ಕರ್ ಹಾಗೂ ಅಝರುದ್ದೀನ್ ನಡುವಿನ 222 ರನ್ ಗಳ ಜೊತೆಯಾಟವು ಇಂದಿಗೂ ಸ್ಮರಣೀಯವಾಗಿಯೇ ಉಳಿದಿದೆ.
27 ವರ್ಷಗಳ ಹಿಂದೆ ದಾಖಲಾಗಿದ್ದ ಈ ದ್ವಿಶತಕ ಜೊತೆಯಾಟವು ಇಂದಿಗೂ ಸ್ಮರಣೀಯವೂ, ಸ್ಫೂರ್ತಿದಾಯಕವೂ ಆಗಿ ಉಳಿದಿದೆ ಎಂಬುದು ಕ್ರಿಕೆಟ್ ಪ್ರಿಯರ ಅಭಿಪ್ರಾಯ.