×
Ad

ಮುಂಬೈ ಬೀಚ್ ನಲ್ಲಿ ನಿದ್ರಿಸುತ್ತಿದ್ದವರ ಮೇಲೆ ಹರಿದ ಕಾರು; ಒಬ್ಬ ಮೃತ್ಯು

Update: 2024-08-14 08:09 IST

ಮುಂಬೈ: ನಿದ್ರಿಸುತ್ತಿದ್ದ ಇಬ್ಬರ ಮೇಲೆ ಎಸ್ ಯುವಿ ಕಾರು ಹರಿದು ಒಬ್ಬ ಮೃತಪಟ್ಟು ಮತ್ತೊಬ್ಬ ಗಾಯಗೊಂಡಿರುವ ಘಟನೆ ಇಲ್ಲಿನ ವರ್ಸೋವಾ ಬೀಚ್ ನಲ್ಲಿ ನಡೆದಿದೆ. ರಿಕ್ಷಾ ಚಾಲಕ ಗಣೇಶ್ ಯಾದವ್ (36) ಮೃತ ವ್ಯಕ್ತಿ. ಆತನ ಸ್ನೇಹಿತ ಕೊರಿಯರ್ ಡೆಲಿವರಿ ಬಾಯ್ ಶ್ರೀವಾಸ್ತವ (36) ಗಾಯಗೊಂಡಿದ್ದಾರೆ.

ಶ್ರೀವಾಸ್ತವ ಅವರ ಮುಖ ಹಾಗೂ ಎಡಗೈಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ನಾಗ್ಪುರದ ನಿಖಿಲ್ ಜಾವಡೆ (34) ಹಾಗೂ ಆತನ ಸ್ನೇಹಿತ ಐರೋಳಿಯ ಶುಭಂ ಡಾಂಗೆ (33) ಎಂಬಿಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಬ್ಬರೂ ಕ್ಯಾಬ್ ಸರ್ವಿಸ್ ವ್ಯವಹಾರದಲ್ಲಿ ಪಾಲುದಾರರು.

ಸಾಗರ್ ಕುಟೀರ ರಹಿವಾಸಿ ಸಂಘ ಕೊಳಗೇರಿಯ ನಿವಾಸಿಗಳಾಗಿದ್ದ ಸಂತ್ರಸ್ತರು ಸೆಖೆಯ ಹೊಡೆತದಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಾತ್ರಿ ಬೀಚ್ ಬಳಿ ಮಲಗಿದ್ದರು. ಮುಂಜಾನೆ 5.45ರ ವೇಳೆಗೆ ಈ ಅವಘಡ ನಡೆದಿದೆ. ಆರೋಪಿಗಳನ್ನು ಅಂಧೇರಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.

ವೇಗವಾಗಿ ಬಂದ ಎಸ್ಯುವಿ ನಿಯಮಬಾಹಿರವಾಗಿ ಕಡಲ ಕಿನಾರೆ ಪ್ರವೇಶಿಸಿದ್ದು, ನಿದ್ರಿಸುತ್ತಿದ್ದ ಯಾದವ್ ಅವರ ಮೇಲೆ ಹರಿದು, ಶ್ರೀವಾಸ್ತವ ಅವರ ಮುಖದ ಸನಿಹದಲ್ಲಿ ಹಾದುಹೋಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಚಾಲಕ ಹಾಗೂ ಆತನ ಸ್ನೇಹಿತನನ್ನು ಬಂಧಿಸಲಾಗಿದೆ. ಮೇಲ್ನೋಟಕ್ಕೆ ಇಬ್ಬರೂ ಪಾನಮತ್ತರಾಗಿದ್ದುದು ಕಂಡುಬಂದಿದೆ. ಆರೋಪಿಗಳ ರಕ್ತದ ಮಾದರಿ ಪರೀಕ್ಷಿಸಲಾಗಿದೆ ಎಂದು ಡಿಸಿಪಿ ರಾಜ್ ತಿಲಕ್ ರೋಷನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News