ಮಾಲೇಗಾಂವ್ ಸ್ಫೋಟ ಪ್ರಕರಣ | ನ್ಯಾಯಾಧೀಶರ ತೀರ್ಪಿನ ನಂತರ ಪ್ರಗ್ಯಾ ಠಾಕೂರ್ ಹೇಳಿದ್ದೇನು?
ಪ್ರಗ್ಯಾ ಠಾಕೂರ್ | PC : NDTV
ಮುಂಬೈ: 2008ರಲ್ಲಿ ಆರು ಮಂದಿಯನ್ನು ಬಲಿ ಪಡೆದಿದ್ದ ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದ ಮಧ್ಯಪ್ರದೇಶದ ಮಾಜಿ ಸಂಸದೆ ಪ್ರಗ್ಯಾ ಠಾಕೂರ್ ರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಮುಂಬೈನ ನ್ಯಾಯಾಲಯವೊಂದು ಖುಲಾಸೆಗೊಳಿಸಿದೆ.
ಈ ತೀರ್ಪು ಪ್ರಕಟವಾಗುವ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಪ್ರಗ್ಯಾ ಠಾಕೂರ್, “ಯಾರನ್ನಾದರೂ ತನಿಖೆಗಾಗಿ ಕರೆದಾಗ, ಅದರ ಹಿಂದೆ ಒಂದು ಆಧಾರವಿರಬೇಕು ಎಂದು ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ನನ್ನನ್ನು ತನಿಖೆಗಾಗಿ ಕರೆಯಲಾಯಿತು, ಬಂಧಿಸಲಾಯಿತು ಹಾಗೂ ಕಿರುಕುಳ ನೀಡಲಾಯಿತು. ಇದು ನನ್ನ ಸಂಪೂರ್ಣ ಜೀವನವನ್ನೇ ಹಾಳುಗೆಡವಿತು. ನಾನು ಸಾಧ್ವಿಯ ಜೀವನ ಸಾಗಿಸುತ್ತಿದ್ದರೂ, ನನ್ನನ್ನು ಆರೋಪಿಯನ್ನಾಗಿಸಲಾಯಿತು. ಯಾರೂ ಕೂಡಾ ನನ್ನೊಂದಿಗೆ ನಿಲ್ಲಲು ಬಯಸಲಿಲ್ಲ. ನಾನು ಸಾಧ್ವಿಯಾಗಿದ್ದರಿಂದ, ನಾನಿಂದು ಜೀವಂತವಾಗಿದ್ದೇನೆ. ಅವರು ಕಾವಿ ಬಣ್ಣಕ್ಕೆ ಪಿತೂರಿಯ ಮೂಲಕ ಮಸಿ ಬಳಿದರು. ಇಂದು ಕಾವಿ ಬಣ್ಣ ಗೆಲುವು ಸಾಧಿಸಿದ್ದು, ಯಾರೂ ದೋಷಿಗಳಾಗಿದ್ದಾರೊ, ಅವರನ್ನು ದೇವರು ಶಿಕ್ಷಿಸಲಿದ್ದಾನೆ” ಎಂದು ತಮ್ಮ ಸಿಟ್ಟು ಹೊರ ಹಾಕಿದರು.
ಈ ಕುರಿತು ಪ್ರತಿಕ್ರಿಯಿಸಿದ ಪ್ರಗ್ಯಾ ಠಾಕೂರ್ ಅವರ ಸಹೋದರಿ ಉಪ್ಮಾ ಸಿಂಗ್, ನಮಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಂಪೂರ್ಣ ವಿಶ್ವಾಲಸವಿತ್ತು ಎಂದು ಸ್ಪಷ್ಟಪಡಿಸಿದರು. “ನಾನು ಅಮಾಯಕಿ ಎಂದು ಆಕೆ ಮೊದಲಿನಿಂದಲೂ ಹೇಳುತ್ತಾ ಬಂದಿದ್ದಳು” ಎಂದೂ ಅವರು ಹೇಳಿದರು.
ಸೆಪ್ಟೆಂಬರ್ 29, 2008ರಂದು ಮಾಲೇಗಾಂವ್ ನಲ್ಲಿ ಬೈಕ್ ಒಂದರಲ್ಲಿ ಇರಿಸಲಾಗಿದ್ದ ಸ್ಫೋಟಕಗಳು ಸ್ಫೋಟಗೊಂಡಿದ್ದರಿಂದ, ಆರು ಮಂದಿ ಮೃತಪಟ್ಟಿದ್ದರು. ಈ ಕುರಿತು ತನಿಖೆ ಕೈಗೆತ್ತಿಕೊಂಡಿದ್ದ ಮುಂಬೈನ ಭಯೋತ್ಪಾದಕ ನಿಗ್ರಹ ದಳವು, ಎಲ್ಎಂಎಲ್ ಫ್ರೀಡಂ ಬೈಕ್ ನ ನೋಂದಣಿ ಸಂಖ್ಯೆ ನಕಲಿ ಎಂಬುದನ್ನು ಪತ್ತೆ ಹಚ್ಚಿತ್ತು. ಈ ಬೈಕ್ ನ ಚಾಸಿಸ್ ಹಾಗೂ ಎಂಜಿನ್ ಸಂಖ್ಯೆಗಳನ್ನು ಅಳಿಸಿ ಹಾಕಲಾಗಿತ್ತು. ಸ್ಫೋಟ ಸಂಭವಿಸಿದ ಸ್ಥಳದಿಂದ ಸಂಗ್ರಹಿಸಲಾಗಿದ್ದ ಬೈಕ್ ನ ಬಿಡಿಭಾಗಗಳನ್ನು ವಿಧಿ ವಿಜ್ಞಾನ ಪರೀಕ್ಷೆಗೆ ರವಾನಿಸಲಾಗಿತ್ತು. ಆಗ ಮರುಸ್ಥಾಪನೆಯಾಗಿದ್ದ ಎಂಜಿನ್ ಸಂಖ್ಯೆ ಹಾಗೂ ಬೈಕ್ ಪ್ರಗ್ಯಾ ಠಾಕೂರ್ ಹೆಸರಲ್ಲಿ ನೋಂದಣಿಯಾಗಿರುವುದು ಕಂಡು ಬಂದಿತ್ತು. ಈ ಸಂಬಂಧ ಅವರನ್ನು ಅಕ್ಟೋಬರ್ 23, 2008ರಂದು ಬಂಧಿಸಲಾಗಿತ್ತು.
ಗುರುವಾರ ಈ ಪ್ರಕರಣದ ತೀರ್ಪು ಪ್ರಕಟಿಸಿದ ಮುಂಬೈನ ನ್ಯಾಯಾಲಯವೊಂದು, ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಗ್ಯಾ ಠಾಕೂರ್, ಕರ್ನಲ್ ಪುರೋಹಿತ್ ಸೇರಿದಂತೆ ಎಲ್ಲ ಆರೋಪಿಗಳನ್ನೂ ಖುಲಾಸೆಗೊಳಿಸಿತು.