×
Ad

ವಿದೇಶಿ ಅಲ್ಪಸಂಖ್ಯಾತರು 2024ರೊಳಗೆ ಬಂದಿದ್ದರೆ ಭಾರತದಲ್ಲಿ ವಾಸ ಮುಂದುವರಿಸಬಹುದು: ಕೇಂದ್ರ ಸರ್ಕಾರ

ಸಿಎಎ ಕಟ್-ಆಫ್ ದಿನಾಂಕ ವಿಸ್ತರಣೆ

Update: 2025-09-03 21:14 IST

ಸಾಂದರ್ಭಿಕ ಚಿತ್ರ | PC : PTI

 

ಹೊಸದಿಲ್ಲಿ,ಸೆ.3: ಧಾರ್ಮಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಂದ ಡಿ.31,2024 ರೊಳಗೆ ಭಾರತಕ್ಕೆ ಬಂದಿರುವ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದುಗಳು, ಸಿಕ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರು ಪಾಸ್‌ಪೋರ್ಟ್ ಅಥವಾ ಇತರ ಪ್ರಯಾಣ ದಾಖಲೆಗಳಿಲ್ಲದೆ ದೇಶದಲ್ಲಿ ಉಳಿದುಕೊಳ್ಳಲು ಅವಕಾಶ ನೀಡುವುದಾಗಿ ಕೇಂದ್ರ ಗೃಹ ಸಚಿವಾಲಯವು ಆದೇಶದಲ್ಲಿ ತಿಳಿಸಿದೆ.

ಕಳೆದ ವರ್ಷ ಜಾರಿಗೊಂಡಿರುವ ಪೌರತ್ವ (ತಿದ್ದುಪಡಿ) ಕಾಯ್ದೆ(ಸಿಎಎ) ಪ್ರಕಾರ ಡಿ.31,2014ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಬಂದಿರುವ ಈ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಿಗೆ ಭಾರತೀಯ ಪೌರತ್ವವನ್ನು ನೀಡಲಾಗುತ್ತದೆ.

ಈಗಷ್ಟೇ ಅನುಷ್ಠಾನಗೊಂಡಿರುವ 2025ರ ವಲಸೆ ಮತ್ತು ವಿದೇಶಿಯರ ಕಾಯ್ದೆಯಡಿ ಹೊರಡಿಸಲಾಗಿರುವ ಸೆ.1ರ ಮಹತ್ವದ ಆದೇಶವು 2024ರ ಬಳಿಕ ಭಾರತಕ್ಕೆ ಆಗಮಿಸಿ ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದ ಹೆಚ್ಚಿನ ಸಂಖ್ಯೆಯ ಜನರಿಗೆ, ವಿಶೇಷವಾಗಿ ಪಾಕಿಸ್ತಾನದಿಂದ ಬಂದಿದ್ದ ಹಿಂದುಗಳಿಗೆ ನೆಮ್ಮದಿಯನ್ನು ಒದಗಿಸುತ್ತದೆ.

ಧಾರ್ಮಿಕ ಕಿರುಕುಳದಿಂದಾಗಿ ಅಥವಾ ಧಾರ್ಮಿಕ ಕಿರುಕುಳದ ಭೀತಿಯಿಂದಾಗಿ ಡಿ.31,2024ರಂದು ಅಥವಾ ಅದರ ಮೊದಲು ಅನಿವಾರ್ಯವಾಗಿ ಭಾರತಕ್ಕೆ ಆಗಮಿಸಿ ಆಶ್ರಯ ಪಡೆದಿರುವ ಪಾಸ್‌ ಪೋರ್ಟ್ ಮತ್ತು ಇತರ ಪ್ರಯಾಣ ದಾಖಲೆಗಳನ್ನು ಹೊಂದಿರದ ಅಥವಾ ಸಿಂಧುತ್ವದ ಅವಧಿ ಮುಗಿದಿರುವ ದಾಖಲೆಗಳನ್ನು ಹೊಂದಿರುವ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದು, ಬೌದ್ಧ, ಸಿಖ್, ಜೈನ, ಪಾರ್ಸಿ ಮತ್ತು ಕ್ರೈಸ್ತ ಧರ್ಮದ ವ್ಯಕ್ತಿಗಳಿಗೆ ಮಾನ್ಯವಾದ ಪಾಸ್‌ಪೋರ್ಟ್ ಮತ್ತು ವೀಸಾ ಹೊಂದಿರಬೇಕು ಎಂಬ ನಿಯಮದಿಂದ ವಿನಾಯಿತಿ ನೀಡಲಾಗಿದೆ ಎಂದು ಗೃಹ ಸಚಿವಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News