ಇವಿ, ಬ್ಯಾಟರಿಗೆ ಸಬ್ಸಿಡಿ: ಭಾರತದ ವಿರುದ್ಧ ವಿಶ್ವ ವಾಣಿಜ್ಯ ಸಂಘಟನೆಗೆ ಚೀನಾ ದೂರು
Update: 2025-10-15 19:29 IST
ಸಾಂದರ್ಭಿಕ ಚಿತ್ರ | Photo Credi : freepik.com
ಹೊಸದಿಲ್ಲಿ: ವಿದ್ಯುತ್ ಚಾಲಿತ ವಾಹನಗಳು ಹಾಗೂ ಬ್ಯಾಟರಿಗಳಿಗೆ ಸಬ್ಸಿಡಿ ನೀಡುತ್ತಿರುವ ಭಾರತದ ಕ್ರಮವನ್ನು ಪ್ರಶ್ನಿಸಿ ವಿಶ್ವ ವ್ಯಾಪಾರ ಸಂಘಟನೆಗೆ ಚೀನಾ ದೂರು ಸಲ್ಲಿಸಿದೆ.
ಚೀನಾ ಸಲ್ಲಿಸಿರುವ ದೂರನ್ನು ವಾಣಿಜ್ಯ ಸಚಿವಾಲಯ ವಿಸ್ತೃತವಾಗಿ ಪರಿಶೀಲಿಸಲಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ.
ಚೀನಾದ ಈ ನಡೆಯನ್ನು ದೃಢಪಡಿಸಿರುವ ಅಧಿಕಾರಿಯೊಬ್ಬರು, ಇಂತಹುದೇ ದೂರನ್ನು ತುರ್ಕಿಯಾ, ಕೆನಡಾ ಹಾಗೂ ಯುರೋಪ್ ಒಕ್ಕೂಟದ ವಿರುದ್ಧವೂ ಚೀನಾ ದಾಖಲಿಸಿದೆ ಎಂದು ಹೇಳಿದ್ದಾರೆ.
“ಭಾರತದೊಂದಿಗೆ ಈ ಕುರಿತು ಸಮಾಲೋಚನೆ ನಡೆಸಬೇಕು ಎಂದು ಚೀನಾ ಮನವಿ ಮಾಡಿದೆ” ಎಂದು ಅವರು ತಿಳಿಸಿದ್ದಾರೆ.
ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳ ಪ್ರಕಾರ, ವ್ಯಾಜ್ಯ ಪರಿಹಾರ ಪ್ರಕ್ರಿಯೆಯಲ್ಲಿ ಸಮಾಲೋಚನೆ ಪ್ರಥಮ ಹಂತವಾಗಿದೆ.