ಬರ್ತ್ ಡೇ ಪಾರ್ಟಿಯಲ್ಲಿ ಸಹೋದ್ಯೋಗಿಯ ಕೊಲೆ; ನಾಲ್ವರು ಟೆಕ್ಕಿಗಳ ಬಂಧನ
ಹೈದರಾಬಾದ್: ನಗರದ ಹೊರವಲಯದ ಫಾರ್ಮ್ ಹೌಸ್ ನಲ್ಲಿ ನಡೆದ ಬರ್ತ್ ಡೇ ಪಾರ್ಟಿಯಲ್ಲಿ ಸಹೋದ್ಯೋಗಿಯನ್ನು ಕೊಳಕ್ಕೆ ತಳ್ಳಿ ಕೊಂದ ಆರೋಪದಲ್ಲಿ ಮೂವರು ಟೆಕ್ಕಿಗಳು ಸೇರಿದಂತೆ ನಾಲ್ಕು ಮಂದಿಯನ್ನು ಘಟಕೇಸರ್ ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಪ್ರಮುಖ ಆರೋಪಿಗಳು ಗಜಾಂಬಿಕಲ್ ಅಜಯ್ ತೇಜಾ (24) ಎಂಬ ಸಹೋದ್ಯೋಗಿಯನ್ನು ಕೊಳಕ್ಕೆ ತಳ್ಳಿ ಸಾಯಿಸಿ, ಇದನ್ನು ಆಕಸ್ಮಿಕ ಘಟನೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳಾದ ರಂಜಿತ್ ರೆಡ್ಡಿ ಮತ್ತು ಸಾಯಿಕುಮಾರ್ ಎಂಬವರು ತೇಜಾ ಜತೆ ವೃತ್ತಿ ಭಿನ್ನಾಭಿಪ್ರಾಯ ಹೊಂದಿದ್ದರು ಎನ್ನಲಾಗಿದೆ.
ಐಟಿ ಕಂಪನಿಯ ವ್ಯವಸ್ಥಾಪಕ ಶ್ರೀಕಾಂತ್ ಎಂಬಾತನನ್ನು ಪಾರ್ಟಿಗೆ ಅಕ್ರಮವಾಗಿ ಮದ್ಯ ಪೂರೈಸಿದ ಆರೋಪದಲ್ಲಿ ಬಂಧಿಸಲಾಗಿದೆ. ಅಬ್ಕಾರಿ ನಿಯಮದ ಪ್ರಕಾರ ಖಾಸಗಿ ಸ್ಥಳದಲ್ಲಿ 6 ಬಾಟಲಿಗಿಂತ ಹೆಚ್ಚು ಮದ್ಯ ಪೂರೈಕೆ ಮಾಡುವುದಾದರೆ ಇಲಾಖೆಯಿಂದ ಅನುಮತಿ ಪಡೆಯಬೇಕು. ಬಂಧಿತರಲ್ಲಿ ಫಾರ್ಮ್ ಹೌಸ್ ಮಾಲೀಕ ವೆಂಕಟೇಶ್ ಕೂಡಾ ಸೇರಿದ್ದಾನೆ. ಕೊಳದಲ್ಲಿ ಸುರಕ್ಷಾ ಕ್ರಮಗಳನ್ನು ಅನುಷ್ಠಾನಗೊಳಿಸದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ.
ಶ್ರೀಕಾಂತ್ ತನ್ನ ಹುಟ್ಟುಹಬ್ಬ ಹಾಗೂ ಪ್ರಾಜೆಕ್ಟ್ ಪೂರ್ಣಗೊಳಿಸಿದ ಸಂತೋಷದಲ್ಲಿ ಈ ಪಾರ್ಟಿ ಆಯೋಜಿಸಿದ್ದು, ಸೆಪ್ಟೆಂಬರ್ 1ರಂದು ದಿನ ನಿಗದಿಪಡಿಸಿ, ತನ್ನ ಎಲ್ಲ ಸಹೋದ್ಯೋಗಿಗಳನ್ನು ಆಹ್ವಾನಿಸಿದ್ದ. ಮಧ್ಯರಾತ್ರಿ 12.30ರ ಸುಮಾರಿಗೆ ರಂಜಿತ್ ಹಾಗೂ ಸಾಯಿ, ಅಜಯ್ ತೇಜನನ್ನು ಹೊರಗೆ ಕರೆದೊಯ್ದು ಕೊಳಕ್ಕೆ ತಳ್ಳಿದ ಬಳಿಕ ಪಾರ್ಟಿಯಲ್ಲಿ ಸೇರಿಕೊಂಡರು. ಉಳಿದವರು ತೇಜಾ ನಾಪತ್ತೆಯಾಗಿರುವುದನ್ನು ಗಮನಿಸಿ ಹುಡುಕಿದಾಗ ಕೊಳದಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ತೇಜಾ ಪತ್ತೆಯಾಗಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ಹೇಳಿದ್ದಾರೆ.