USAID ನಿಧಿ ಕುರಿತು ವಿವಾದ | ಭಾರತೀಯ ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ದಾಳಿಯ ಹಿಂದಿರುವವರನ್ನು ಬಯಲಿಗೆಳೆಯಬೇಕು: ಧನ್ಕರ್
ಜಗದೀಪ ಧನ್ಕರ್ | PTI
ಹೊಸದಿಲ್ಲಿ: ಭಾರತದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು USAID ನಿಧಿ ಬಳಕೆಯ ಆರೋಪದ ಕುರಿತು ಶುಕ್ರವಾರ ಇಲ್ಲಿ ಕಳವಳವನ್ನು ವ್ಯಕ್ತಪಡಿಸಿದ ಉಪರಾಷ್ಟ್ರಪತಿ ಜಗದೀಪ ಧನ್ಕರ್ ಅವರು, ದೇಶದ ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ಇಂತಹ ದಾಳಿಗೆ ಅವಕಾಶ ನೀಡಿದವರನ್ನು ಬಯಲಿಗೆಳೆಯಬೇಕು ಎಂದು ಹೇಳಿದರು. ಇಂತಹ ಶಕ್ತಿಗಳ ವಿರುದ್ಧ ದಾಳಿ ನಡೆಸುವುದು ಜನರ ‘ರಾಷ್ಟ್ರೀಯ ಕರ್ತವ್ಯ’ವಾಗಿದೆ ಎಂದೂ ಅವರು ಹೇಳಿದರು.
ಬುಧವಾರ ಮಿಯಾಮಿಯಲ್ಲಿ ಮಾಡಿದ್ದ ಭಾಷಣದಲ್ಲಿ ಭಾರತದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು USAIDನಿಂದ 21 ಮಿಲಿಯನ್ ಡಾಲರ್ ಅನುದಾನವನ್ನು ಮತ್ತೊಮ್ಮೆ ಪ್ರಶ್ನಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಅವರು(ಹಿಂದಿನ ಬೈಡೆನ್ ಆಡಳಿತ) ಬೇರೆ ಯಾರನ್ನೋ ಚುನಾಯಿಸಲು ಪ್ರಯತ್ನಿಸುತ್ತಿದ್ದರು ಎಂದು ನಾನು ಭಾವಿಸಿದ್ದೇನೆ‘ ಎಂದು ಹೇಳಿದ್ದರು.
ಶುಕ್ರವಾರ ಇಲ್ಲಿ ಧ್ಯಾನ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧನ್ಕರ್, USAID ನಿಧಿಯ ಕುರಿತು ಹೇಳಿಕೆಗಳು ಅಧಿಕಾರಯುತ ವ್ಯಕ್ತಿಯಿಂದ ಬಂದಿವೆ ಮತ್ತು ಹಣವನ್ನು ನೀಡಲಾಗಿತ್ತು ಎನ್ನುವುದು ಸತ್ಯ ಎಂದು ಹೇಳಿದರು.
ವಿವಾದದ ಮೂಲವನ್ನು ತಿಳಿದುಕೊಳ್ಳಲು ‘ಚಾಣಕ್ಯ ನೀತಿ’ಯನ್ನು ಬಳಸುವಂತೆ ಕರೆ ನೀಡಿದ ಅವರು, ಸಮಸ್ಯೆಯನ್ನು ಬೇರುಸಹಿತ ನಿರ್ಮೂಲನ ಮಾಡಬೇಕು ಎಂದರು.
ಚುನಾವಣಾ ಪಾವಿತ್ರ್ಯಕ್ಕೆ ಹಾನಿಯನ್ನುಂಟು ಮಾಡುವ ಇಂತಹ ದಾಳಿಗಳಿಗೆ ಅವಕಾಶ ನೀಡಿದ ಜನರನ್ನು ಬಯಲಿಗೆಳೆಯಬೇಕು ಎಂದು ಧನ್ಕರ್ ಹೇಳಿದರು.