×
Ad

ಭೂವ್ಯಾಜ್ಯ: ಕೇಂದ್ರ ಸಚಿವ ಕೀರ್ತಿ ವರ್ಧನ್ ಸಿಂಗ್ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಸೂಚನೆ

Update: 2025-08-13 16:56 IST

ಕೀರ್ತಿವರ್ಧನ್ ಸಿಂಗ್ (Photo credit: telegraphindia.com)

ಗೊಂಡಾ (ಉತ್ತರ ಪ್ರದೇಶ): ಭೂವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಗೊಂಡಾ ಜಿಲ್ಲೆಯ ನ್ಯಾಯಾಲಯವೊಂದು ಪೊಲೀಸರಿಗೆ ಸೂಚನೆ ನೀಡಿದೆ.

ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾ. ಅಪೇಕ್ಷಾ ಸಿಂಗ್ ಈ ಆದೇಶ ಹೊರಡಿಸಿದ್ದು, ಸಚಿವ ಕೀರ್ತಿ ವರ್ಧನ್ ಸಿಂಗ್, ಸಹಚರರಾದ ರಾಜೇಶ್ ಸಿಂಗ್, ಪಿಂಕು ಸಿಂಗ್ ಹಾಗೂ ಸಹದೇವ್ ಯಾದವ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುರವಂತೆ ಮಂಕಾಪುರ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿದ್ದಾರೆ.

ಮಂಕಾಪುರ ಪ್ರದೇಶದ ಭಿತೌರಾ ನಿರಾಸಿ ಅಜಯ್ ಸಿಂಗ್ ಎಂಬವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಸೆಕ್ಷನ್ 173 (4)ರ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳನಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ತಮ್ಮ ಪತ್ನಿ ಮನಿಷಾ ಸಿಂಗ್ ಹೆಸರಿನಲ್ಲಿ ನೋಂದಣಿಯಾಗಿದ್ದ ಭೂಮಿಯನ್ನು ಮೂಲ ಮಾರಾಟಗಾರರಾದ ಬಿಟ್ಟನ್ ದೇವಿ ಮೇಲೆ ಪ್ರಭಾವ ಬೀರಿ, ಮೂರು ವರ್ಷದ ಹಳೆಯ ಸ್ಟಾಂಪ್ ಪೇಪರ್ ಬಳಸಿ ಮಿಥಲೇಶ್ ರಸ್ತೋಗಿ ಹಾಗೂ ಕಾಂತಿ ಸಿಂಗ್ ಅವರ ಹೆಸರಿಗೆ ವರ್ಗಾಯಿಸುವ ಮೂಲಕ ತಮಗೆ ವಂಚಿಸಲಾಗಿದೆ ಎಂದು ಅಜಯ್ ಸಿಂಗ್ ಆರೋಪಿಸಿದ್ದಾರೆ.

ಈ ಸಂಬಂಧ ದೂರು ನೀಡಿದಾಗ, ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆಗೆ ಆದೇಶಿಸಿದ್ದರು. ಈ ತನಿಖೆಯಲ್ಲಿ ಆರೋಪ ದೃಢಪಟ್ಟಿತ್ತು ಎಂದು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಆಧಾರದ ಮೇಲೆ 2024ರಲ್ಲಿ ಮಾರಾಟಗಾರರು ಹಾಗೂ ಖರೀದಿದಾರರ ಮೇಲೆ ಪೊಲೀಸರು ಸಂಬಂಧಿತ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ನಂತರ ಪ್ರಕರಣವನ್ನು ಮುಕ್ತಾಯಗೊಳಿಸಿ ಅಂತಿಮ ವರದಿ ಸಲ್ಲಿಸಿದ್ದರು ಎಂದೂ ಅವರು ದೂರಿದ್ದಾರೆ.

ಪ್ರಕರಣವನ್ನು ಅಂತ್ಯಗೊಳಿಸುವ ಪೊಲೀಸರ ವರದಿ ವಿರುದ್ಧ ಅಜಯ್ ಸಿಂಗ್ ಸಿಂಗ್ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಈ ಸಂಬಂಧ ಹೆಚ್ಚಿನ ತನಿಖೆ ನಡೆಸುವಂತೆ ಮಾರ್ಚ್ ತಿಂಗಳಲ್ಲಿ ಆದೇಶಿಸಿತ್ತು.

ಇದಾದ ಬಳಿಕ, ಅಜಯ್ ಸಿಂಗ್ ದಂಪತಿಗಳ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದ ರಾಜೇಶ್ ಸಿಂಗ್, ಅವರಿಗೆ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News