ಈಡಿಯಿಂದ 2,385 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋ ಜಪ್ತಿ
ಒಕ್ಟಾಎಫ್‌ಎಕ್ಸ್ ಹಗರಣದ ರೂವಾರಿ ಸ್ಪೇನ್ ನಲ್ಲಿ ಬಂಧನ
ED | Photo Credit : X
ಹೊಸದಿಲ್ಲಿ,ಅ.17: ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ (ಪಿಎಮ್‌ಎಲ್‌ಎ)2,385 ಕೋ.ರೂ.ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ಜಪ್ತಿ ಮಾಡಲಾಗಿದ್ದು,ಇದೇ ವೇಳೆ ಬಹುಕೋಟಿ ರೂ.ಗಳ ಒಕ್ಟಾಎಫ್‌ಎಕ್ಸ್ ಪೊಂಜಿ ಹಗರಣದ ಸ್ಪ್ಯಾನಿಷ್ ರೂವಾರಿ ಪಾವೆಲ್ ಪ್ರೊರೊರೊವ್ ಎಂಬಾತನನ್ನು ಸ್ಪೇನಿನಲ್ಲಿ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಇದು ಒಕ್ಟಾಎಫ್‌ಎಕ್ಸ್ ಆನ್‌ಲೈನ್ ಟ್ರೇಡಿಂಗ್ ಪ್ಲ್ಯಾಟ್‌ಫಾರ್ಮ್ ಮೂಲಕ ತ್ವರಿತ, ಹೆಚ್ಚಿನ ಆದಾಯದ ಸುಳ್ಳು ಭರವಸೆಯನ್ನು ನೀಡಿ ಭಾರತೀಯ ಹೂಡಿಕೆದಾರರನ್ನು ವಂಚಿಸಿರುವ ಅನಧಿಕೃತ ವಿದೇಶಿ ವಿನಿಮಯ ವ್ಯಾಪಾರ ಕಾರ್ಯಾಚರಣೆಗಳ ಪ್ರಕರಣವಾಗಿದೆ.
ಸುದ್ದಿಸಂಸ್ಥೆಯು ಉಲ್ಲೇಖಿಸಿರುವಂತೆ ಹಗರಣಕ್ಕೆ ಸಂಬಂಧಿಸಿದ 2,385 ಕೋ.ರೂ.ಮೌಲ್ಯದ ಕ್ರಿಪ್ಟೋಕರೆನ್ಸಿಗಳ ಜಪ್ತಿಗಾಗಿ ಪಿಎಂಎಲ್‌ಎ ಅಡಿ ತಾತ್ಕಾಲಿಕ ಆದೇಶವನ್ನು ಹೊರಡಿಸಲಾಗಿದೆ. ಹಲವಾರು ದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಹಣಕಾಸು ಸೈಬರ್ ಅಪರಾಧಗಳಲ್ಲಿ ಪಾತ್ರಕ್ಕಾಗಿ ಪ್ರೊರೊರೊವ್‌ನನ್ನು ಸ್ಪೇನ್ ಪೋಲಿಸರು ಬಂಧಿಸಿದ್ದಾರೆ.
ಜು.2022 ಮತ್ತು ಎ.2023ರ ನಡುವೆ ಒಕ್ಟಾಎಫ್‌ಎಕ್ಸ್ ಆರ್‌ಬಿಐ ಅನುಮತಿಯಲ್ಲದೆ ಕರೆನ್ಸಿ, ಕಮಾಡಿಟಿಗಳು ಮತ್ತು ಕ್ರಿಪ್ಟೋದಲ್ಲಿ ಟ್ರೇಡ್ ನಡೆಸಲು ಭಾರತೀಯ ಹೂಡಿಕೆದಾರರನ್ನು ಪ್ರೇರೇಪಿಸಿತ್ತು ಎಂದು ಆರೋಪಿಸಲಾಗಿದೆ.
ವಿಶ್ವಾಸವನ್ನು ಗಳಿಸಲು ಆರಂಭದಲ್ಲಿ ಹೂಡಿಕೆದಾರರಿಗೆ ಸಣ್ಣ ಲಾಭಗಳನ್ನು ನೀಡಲಾಗಿತ್ತು ಎಂದು ಈ.ಡಿ.ಹೇಳಿದೆ.
ಈ ಅವಧಿಯಲ್ಲಿ ಭಾರತೀಯ ಹೂಡಿಕೆದಾರರು ಸುಮಾರು 1,875 ಕೋ.ರೂ.ಗಳನ್ನು ಕಳೆದುಕೊಂಡಿದ್ದರೆ ಒಕ್ಟೊಎಫ್‌ಎಕ್ಸ್ ಸುಮಾರು 800 ಕೋ.ರೂ.ಗಳ ಲಾಭವನ್ನು ಗಳಿಸಿತ್ತು. 2019 ಮತ್ತು 2024ರ ನಡುವೆ ಕಂಪನಿಯು ಭಾರತೀಯ ಹೂಡಿಕೆದಾರರಿಂದ 5,000 ಕೋ.ರೂ.ಗೂ ಅಧಿಕ ಹಣವನ್ನು ಗಳಿಸಿತ್ತು ಮತ್ತು ಇದರಲ್ಲಿ ಹೆಚ್ಚಿನ ಭಾಗವನ್ನು ಕಾನೂನು ಬಾಹಿರವಾಗಿ ದೇಶದಿಂದ ಹೊರಕ್ಕೆ ಸಾಗಿಸಲಾಗಿತ್ತು ಎಂದು ಈಡಿ ತಿಳಿಸಿದೆ.
ಈಡಿ ಈವರೆಗೆ 2,681 ಕೋ.ರೂ.ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇವುಗಳಲ್ಲಿ ಪ್ರೊರೊರೊವ್ ಒಡೆತನದ 19 ಆಸ್ತಿಗಳು ಮತ್ತು ಸ್ಪೇನ್‌ನಲ್ಲಿರುವ ಐಷಾರಾಮಿ ವಿಹಾರ ನೌಕೆ ಸೇರಿವೆ. ಹಗರಣದಲ್ಲಿ ಭಾಗಿಯಾಗಿರುವ 55 ಸಂಸ್ಥೆಗಳ ವಿರುದ್ಧ ವಿಶೇಷ ಪಿಎಂಎಲ್‌ಎ ನ್ಯಾಯಾಲಯದಲ್ಲಿ ಎರಡು ದೋಷಾರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ.