ದಿತ್ವಾ ಚಂಡಮಾರುತ| ತಮಿಳುನಾಡು–ಪುದುಚೇರಿಯಲ್ಲಿ ಭಾರೀ ಮಳೆ ಸಾಧ್ಯತೆ: ಐಎಂಡಿ ರೆಡ್ ಅಲರ್ಟ್
Photo| PTI
ಚೆನ್ನೈ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ‘ದಿತ್ವಾ’ ಚಂಡಮಾರುತವು ರವಿವಾರ ತಮಿಳುನಾಡು–ಪುದುಚೇರಿ ಕರಾವಳಿ ಸಮೀಪವಾಗಿ ಚಲಿಸುತ್ತಿರುವ ಹಿನ್ನೆಲೆಯಲ್ಲಿ ಪ್ರದೇಶದ ಹಲವೆಡೆ ಭಾರೀ ಮಳೆ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೂಚಿಸಿದೆ. ಕೆಲ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಚಂಡಮಾರುತದ ಪರಿಣಾಮವಾಗಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರವಿವಾರದ 47 ವಿಮಾನಗಳ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಇದರಲ್ಲಿ 36 ದೇಶೀಯ ಹಾಗೂ 11 ಅಂತಾರಾಷ್ಟ್ರೀಯ ವಿಮಾನಗಳು ಸೇರಿವೆ. ಮಧುರೈ, ತಿರುಚಿ, ತೂತುಕುಡಿ ಮತ್ತು ಸೇಲಂ ಮಾರ್ಗಗಳಿಗೆ ತೆರಳಬೇಕಿದ್ದ ಹಾಗೂ ಅಲ್ಲಿಂದ ಚೆನ್ನೈಗೆ ಬರಬೇಕಿದ್ದ ಹಲವು ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.
ಐಎಂಡಿ ಬುಲೆಟಿನ್ ಪ್ರಕಾರ, ಚಂಡಮಾರುತವು ಕಳೆದ ಆರು ಗಂಟೆಗಳಲ್ಲಿ ಗಂಟೆಗೆ ಸುಮಾರು 5 ಕಿಮೀ ವೇಗದಲ್ಲಿ ಉತ್ತರದತ್ತ ಚಲಿಸುತ್ತಿದ್ದು, ಪ್ರಸ್ತುತ ಕಾರೈಕಲ್‌ನ ಪೂರ್ವಕ್ಕೆ 80 ಕಿಮೀ ದೂರದಲ್ಲಿ ನೆಲೆಗೊಂಡಿದೆ. ಮುಂದಿನ 24 ಗಂಟೆಗಳಲ್ಲಿ ಇದು ತಮಿಳುನಾಡು–ಪುದುಚೇರಿ ಕರಾವಳಿಗೆ ಸಮೀಪಿಸುತ್ತಲೇ ಉತ್ತರದತ್ತ ಸಾಗುವ ನಿರೀಕ್ಷೆಯಿದೆ. ರವಿವಾರ ಮುಂಜಾನೆ ಚಂಡಮಾರುತವು ಕರಾವಳಿಯಿಂದ 50 ಕಿಮೀ ಹಾಗೂ ಸಂಜೆ ವೇಳೆಗೆ 25 ಕಿಮೀ ದೂರದ ಬಂಗಾಳಕೊಲ್ಲಿ ಪ್ರದೇಶದಲ್ಲಿ ಇರುವ ಸಾಧ್ಯತೆ ಇದೆ.
ಚೆನ್ನೈ ಪ್ರಾದೇಶಿಕ ಹವಾಮಾನ ಕೇಂದ್ರವು ಕಡಲೂರು, ನಾಗಪಟ್ಟಣಂ, ಮೈಲಾಡುತುರೈ, ವಿಲ್ಲುಪುರಂ, ಚೆಂಗಲ್ಪಟ್ಟು, ಪುದುಚೇರಿ ಮತ್ತು ಕಾರೈಕಲ್ ಜಿಲ್ಲೆಗಳ ಕೆಲ ಭಾಗಗಳಲ್ಲಿ ಅತಿ ಹೆಚ್ಚು ಮಳೆಯ ಸಾಧ್ಯತೆಯನ್ನು ಸೂಚಿಸಿದೆ. ಇತರ ಭಾಗಗಳಲ್ಲೂ ಭಾರೀ ಮಳೆಯ ಮುನ್ಸೂಚನೆ ಇದೆ.
ಐಎಂಡಿ ಪ್ರಕಾರ, ಆಂಧ್ರಪ್ರದೇಶ–ಯಾನಂ ಕರಾವಳಿ ಮತ್ತು ರಾಯಲಸೀಮಾದ ಹಲವೆಡೆ ಅಲ್ಪ ಅಥವಾ ಮಧ್ಯಮ ಮಳೆ, ಕೆಲವೆಡೆ ಭಾರೀ ಮತ್ತು ಅತಿ ಹೆಚ್ಚು ಮಳೆಯ ಸಾಧ್ಯತೆ ಇದೆ. ಕೇರಳದ ಹಲವು ಜಿಲ್ಲೆಗಳಲ್ಲೂ ರವಿವಾರ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.