ಉತ್ತರ ಪ್ರದೇಶ: ವೇತನ ಕೇಳಿದ ದಲಿತ ಯುವಕನನ್ನು ಥಳಿಸಿ ಹತ್ಯೆಗೈದ ಮಾಲಕ
ಸಾಂದರ್ಭಿಕ ಚಿತ್ರ (PTI)
ಲಕ್ನೋ: ಉತ್ತರ ಪ್ರದೇಶದ ಸುಲ್ತಾನ್‌ಪುರ್ ಎಂಬಲ್ಲಿ ತನ್ನ ವೇತನ ಕೇಳಿದ ದಲಿತ ಯುವಕನೊಬ್ಬನನ್ನು ಆತನ ಮಾಲಕ ಥಳಿಸಿ ಸಾಯಿಸಿದ ಘಟನೆ ನಡೆದಿದೆ. ಈ ಘಟನೆ ಆಗಸ್ಟ್ 25ರಂದು ನಡೆದಿದ್ದರೂ ಸಂತ್ರಸ್ತನ ಕುಟುಂಬಕ್ಕೆ ಪೋಸ್ಟ್ ಮಾರ್ಟಂ ವರದಿ ಇನ್ನಷ್ಟೇ ದೊರಕಬೇಕಿದೆ ಎಂದು thewire.in ವರದಿ ಮಾಡಿದೆ.
ಮೃತ ಯುವಕನನ್ನು ವಿನಯ್ ಕುಮಾರ್ (18) ಎಂದು ಗುರುತಿಸಲಾಗಿದೆ. ಆತ ದಿಗ್ವಿಜಯ್ ಯಾದವ್ ಎಂಬಾತನಿಗಾಗಿ ನಾಲ್ಕು ದಿನಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದ. ಆದರೆ ವಿನಯ್ ವೇತನ ಕೇಳಿದಾಗ ಅದನ್ನು ಕೊಡುವ ಬದಲು ಥಳಿಸಿದ ಪರಿಣಾಮ ಆತ ಮೃತಪಟ್ಟನೆಂದು ಆರೋಪಿಸಲಾಗಿದೆ.
ಆತ ದಲಿತ ಎಂಬ ಕಾರಣಕ್ಕೆ ಥಳಿಸಿ ಸಾಯಿಸಲಾಗಿದೆ ಎಂದು ವಿನಯ್ ಕುಟುಂಬ ಆರೋಪಿಸಿದೆ. ಆಗಸ್ಟ್ 25ರಂದು ಅಪರಾಹ್ನ ವಿನಯ್ ತನ್ನ ವೇತನ ಸಂಗ್ರಹಿಸಲೆಂದು ತನ್ನ ಸೈಕಲಿನಲ್ಲಿ ಯಾದವ್ ಬಳಿ ತೆರಳಿದ್ದ ಆದರೆ ವಾಪಸಾಗಲೇ ಇಲ್ಲ. ತಡ ಸಂಜೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂಬ ಮಾಹಿತಿ ಕುಟುಂಬಕ್ಕೆ ಸಿಕ್ಕಿತ್ತು. ಆದರೆ ಅವರು ಆಸ್ಪತ್ರೆ ತಲುಪುವಷ್ಟರಲ್ಲಿ ವಿನಯ್ ಮೃತಪಟ್ಟಿದ್ದ.
ಮರುದಿನ ವಿನಯ್ ತಂದೆ ನೀಡಿದ ದೂರಿನಂತೆ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಯಾದವ್ ಈಗಾಗಲೇ ಶರಣಾಗಿದ್ದರೆ ಇನ್ನೊಬ್ಬ ಆರೋಪಿಯನ್ನು ಇನ್ನಷ್ಟೇ ಬಂಧಿಸಬೇಕಿದೆ.
ಘಟನೆಯನ್ನು ಖಂಡಿಸಿ ಸುಲ್ತಾನಪುರ್ ಜಿಲ್ಲೆಯ ಬರಮದಪುರ್ ಗ್ರಾಮದಲ್ಲಿ ಪ್ರತಿಭಟನೆಗಳು ನಡೆದಿವೆ ಹಾಗೂ ವಿನಯ್ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.