×
Ad

ದಿಲ್ಲಿ | ಡಿಜಿಟಲ್ ಅರೆಸ್ಟ್ : 23 ಕೋ.ರೂ. ಕಳೆದುಕೊಂಡ ನಿವೃತ್ತ ಬ್ಯಾಂಕ್ ಉದ್ಯೋಗಿ

Update: 2025-09-22 22:22 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಸೆ. 22: ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ 23 ಕೋ. ರೂ. ಕಳೆದುಕೊಂಡಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ.

ದಕ್ಷಿಣ ದಿಲ್ಲಿಯ ಗುಲ್‌ಮೊಹರ್ ಪಾರ್ಕ್‌ನ ನಿವಾಸಿ ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿ ನರೇಶ್ ಮಲ್ಹೋತ್ರ ಅವರಿಗೆ ಟೆಲಿಕಾಂ ಕಂಪೆನಿಯ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಕರೆ ಮಾಡಿದ್ದರು. ಅಲ್ಲದೆ, ಮಲ್ಹೋತ್ರಾ ಅವರ ಮೊಬೈಲ್ ಸಂಖ್ಯೆಯನ್ನು ವಂಚನೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ತಿಳಿಸಿದ್ದರು.

ಅನಂತರ 78ರ ಹರೆಯದ ಮಲ್ಹೋತ್ರ ಅವರಿಗೆ ವಿವಿಧ ಸಂಖ್ಯೆಗಳಿಂದ ಕರೆ ಬರಲು ಆರಂಭವಾಯಿತು. ಕರೆ ಮಾಡಿದವರಲ್ಲಿ ಕೆಲವರು ಮುಂಬೈ ಪೊಲೀಸ್ ಎಂದು ಹೇಳಿಕೊಂಡಿದ್ದರೆ, ಇನ್ನು ಕೆಲವರು, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಎಂದು ಹೇಳಿಕೊಂಡಿದ್ದರು.

ಕರೆ ಮಾಡಿದ ವ್ಯಕ್ತಿಗಳು ಮಲ್ಹೋತ್ರ ಅವರ ಬ್ಯಾಂಕ್ ಖಾತೆಗಳು ಹಾಗೂ ಭಯೋತ್ಪಾದಕ ಸಂಘಟನೆಗಳ ನಡುವಿನ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದು, ಗಂಭೀರ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಅನಂತರ ಮಲ್ಹೊತ್ರ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ವಂಚಕರು ತಿಳಿಸಿದ್ದರು. ಅಲ್ಲದೆ ಪ್ರತಿ ಎರಡು ಗಂಟೆಗಳಿಗೊಮ್ಮೆ ವೀಡಿಯೊ ಕರೆಗೆ ಹಾಜರಾಗುವಂತೆ ಅವರಿಗೆ ಆದೇಶಿಸಿದ್ದರು.

ವಂಚಕರು ಮಲ್ಹೋತ್ರಾ ಅವರಿಗೆ ನಂಬಿಕೆ ಮೂಡಿಸಲು ನಕಲಿ ಜಾಮೀನು ಆದೇಶ ರವಾನಿಸಿದ್ದರು. ಅಲ್ಲದೆ, ಇದು ತಮ್ಮ ಬಂಧನವನ್ನು ತಡೆಯುತ್ತದೆ ಎಂದು ಮಲ್ಹೋತ್ರ ಅವರಲ್ಲಿ ಹೇಳಿದ್ದರು. ಪಾಸ್‌ಪೋರ್ಟ್ ಮುಟ್ಟುಗೋಲು, ಅಂತರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ಹಾಗೂ ಕುಟುಂಬಕ್ಕೆ ಹಾನಿ ಉಂಟು ಮಾಡುವ ಬೆದರಿಕೆಯನ್ನು ಕೂಡ ಅವರು ಒಡ್ಡಿದ್ದರು.

ವಂಚಕರು ಆಗಸ್ಟ್ 4ರಿಂದ ಸೆಪ್ಟಂಬರ್ 4ರ ನಡುವಿನ ಒಂದು ತಿಂಗಳ ಅವಧಿಯಲ್ಲಿ 20 ವಹಿವಾಟು ನಡೆಸಿದ್ದರು ಹಾಗೂ ಮಲ್ಹೋತ್ರ ಅವರ ಬ್ಯಾಂಕ್ ಖಾತೆಗಳಿಗೆ 23 ಕೋ.ರೂ. ತೆಗೆದುಕೊಂಡಿದ್ದರು. ಇದಲ್ಲದೆ, ವಂಚಕರು ಮಲ್ಹೋತ್ರ ಅವರ ಬ್ಯಾಂಕ್ ಖಾತೆಯ ವಿವರ ಹಾಗೂ ಹೂಡಿಕೆ ಮಾಹಿತಿಯನ್ನು ಪಡೆದುಕೊಂಡಿದ್ದರು.

23 ಕೋ.ರೂ. ಕಳೆದುಕೊಂಡ ಬಳಿಕ ಮಲ್ಹೋತ್ರ ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ದಿಲ್ಲಿ ಪೊಲೀಸ್‌ನ ಇಂಟಲಿಜೆನ್ಸ್ ಫ್ಯೂಸನ್ ಆ್ಯಂಡ್ ಸ್ಟ್ರಾಟೆಜಿಕ್ ಆಪರೇಷನ್ (ಐಎಫ್‌ಎಸ್‌ಒ) ಘಟಕ ಸೆಪ್ಟಂಬರ್ 19ರಂದು ಎಫ್‌ಐಆರ್ ದಾಖಲಿಸಿದೆ ಹಾಗೂ ತನಿಖೆ ಆರಂಭಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News