ದುರ್ಗಾಪೂಜೆ ವೇಳೆ ಪ್ರಧಾನಿ ಮೋದಿ ಫೋಟೋ ದೇವಿಯ ಪಾದಗಳ ಬಳಿ ಇಡಲು ಕರೆ ನೀಡಿದ ದಿಲ್ಲಿ ಸಿಎಂ ; ವಿವಾದ
Photo: PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ದುರ್ಗಾ ದೇವಿಯ ಪಾದಗಳ ಬಳಿ ಇರಿಸಿ, ಅವರ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಆಶೀರ್ವಾದ ಪಡೆಯುವಂತೆ ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ದುರ್ಗಾ ಪೂಜಾ ಸಮಿತಿಗಳಿಗೆ ವಿನಂತಿಸಿರುವುದು ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ.
ಸೆಪ್ಟೆಂಬರ್ 17ರಂದು ಮೋದಿಯವರ ಜನ್ಮದಿನದಂದು ಪ್ರಾರಂಭವಾಗುವ ಸರಕಾರದ ‘ಸೇವಾ ಪಖ್ವಾಡ’ ಕಾರ್ಯಕ್ರಮದ ಭಾಗವಾಗಿ ಈ ವಿನಂತಿ ಮಾಡಲಾಗಿದೆ ಎಂದು Indian Express ವರದಿ ಮಾಡಿದೆ.
ದುರ್ಗಾದೇವಿ ಪೂಜಾ ಸಮಿತಿಗಳಿಗೆ 1,200 ಯೂನಿಟ್ ಉಚಿತ ವಿದ್ಯುತ್ ಸೇರಿದಂತೆ ಭದ್ರತಾ ವ್ಯವಸ್ಥೆ ಹಾಗೂ ವಿಗ್ರಹ ವಿಸರ್ಜನೆಗೆ ಸೂಕ್ತ ಸ್ಥಳ ಒದಗಿಸಲಾಗುವುದೆಂದು ಸಿಎಂ ಘೋಷಿಸಿದ್ದಾರೆ.
“ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ದಿಲ್ಲಿಯಲ್ಲಿ ಸೇವಾ ಚಟುವಟಿಕೆಗಳು ನಡೆಯಲಿವೆ. ದುರ್ಗಾ ಪೂಜಾ ಮಂಟಪಗಳಲ್ಲಿಯೂ ಸೇವೆ ಸಲ್ಲಿಸಬೇಕು. ಪ್ರಧಾನಿಯವರ ದೀರ್ಘಾಯುಷ್ಯಕ್ಕಾಗಿ ಅವರ ಚಿತ್ರವನ್ನು ದುರ್ಗಾ ದೇವಿಯ ಪಾದಗಳ ಬಳಿ ಇರಿಸಿ ಆಶೀರ್ವಾದ ಪಡೆಯಿರಿ” ಎಂದು ಸಿಎಂ ರೇಖಾ ಗುಪ್ತಾ ಅವರು ದುರ್ಗಾ ಪೂಜಾ ಸೇವಾ ಸಮಿತಿಗಳಿಗೆ ಹೇಳಿದ್ದಾರೆ.
ಸಿಎಂ ಗುಪ್ತಾ ಅವರ ಹೇಳಿಕೆಯನ್ನು ಆಪ್ ಪಕ್ಷ (ಎಎಪಿ) ಟೀಕಿಸಿದೆ. ದಿಲ್ಲಿ ಆಪ್ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್ ಅವರು, “ಬಿಜೆಪಿ ಬಂಗಾಳದ ಸಂಭ್ರಮದ ದುರ್ಗಾಪೂಜೆ ಹಬ್ಬವನ್ನು ಹಣಕ್ಕೆ ಖರೀದಿಸಲು ಬಯಸುತ್ತಿದೆ. 1,200 ಯೂನಿಟ್ ಉಚಿತ ವಿದ್ಯುತ್ ಎಂದರೆ, 12,000 ರೂ.ಗೆ ನಂಬಿಕೆ ಮತ್ತು ಸಂಪ್ರದಾಯವನ್ನು ಮಾರಾಟ ಮಾಡುವಂತಾಗಿದೆ” ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್, “ಕೇಜ್ರಿವಾಲ್ ಸರಕಾರವೇ ಪೂಜಾ ಸಮಿತಿಗಳಿಗೆ ತಮ್ಮ ನಾಯಕರ ಬ್ಯಾನರ್ ಮತ್ತು ಚಿತ್ರಗಳನ್ನು ಹಾಕಲು ಒತ್ತಡ ಹೇರಿತ್ತು. ಈಗ ಪ್ರಧಾನಿಯವರ ಆರೋಗ್ಯಕ್ಕಾಗಿ ಪ್ರಾರ್ಥಿಸಲು ಮಾಡಿದ ವಿನಂತಿಯನ್ನು ವಿವಾದವನ್ನಾಗಿ ಮಾಡುವುದು ಆಪ್ ಪಕ್ಷದ ರಾಜಕೀಯ ಅವಕಾಶವಾದ” ಎಂದು ಹೇಳಿದ್ದಾರೆ.