×
Ad

ನೈಟ್‌ಕ್ಲಬ್ ಮಾಲೀಕರಿಗೆ ತಕ್ಷಣ ಜಾಮೀನು ನೀಡಲು ದಿಲ್ಲಿ ನ್ಯಾಯಾಲಯ ನಕಾರ

Update: 2025-12-10 21:09 IST

Photo Credit : indiatoday.in

ಹೊಸದಿಲ್ಲಿ, ಡಿ. 10: ಗೋವಾದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್‌ಕ್ಲಬ್‌ ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂತ್ರಾ ಸಹೋದರರಿಗೆ ತಕ್ಷಣ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ದಿಲ್ಲಿಯ ನ್ಯಾಯಾಲಯವೊಂದು ಬುಧವಾರ ನಿರಾಕರಿಸಿದೆ.

ಈ ನೈಟ್‌ಕ್ಲಬ್‌ ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ.

ಪ್ರಯಾಣದ ವೇಳೆ ತಮ್ಮನ್ನು ಬಂಧಿಸದಂತೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿ ಬೆಂಕಿ ಅವಘಡ ಪ್ರಕರಣದ ಆರೋಪಿಗಳಾದ ಲೂತ್ರಾ ಸಹೋದರರು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಗೆ ನೀಡುವಂತೆ ದಿಲ್ಲಿಯ ರೋಹಿಣಿ ನ್ಯಾಯಾಲಯ ಗೋವಾ ಸರಕಾರಕ್ಕೆ ನೋಟಿಸ್ ನೀಡಿತು.

ನ್ಯಾಯಾಲಯವು ಅರ್ಜಿಯ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ತಾವು ಭಾರತಕ್ಕೆ ಮರಳಿ ನಿರೀಕ್ಷಣಾ ಜಾಮೀನು ಪಡೆಯಲು ಗೋವಾದ ನ್ಯಾಯಾಲಯಗಳಿಗೆ ಹೋಗಲು ಬಯಸಿದ್ದೇವೆ ಎಂಬುದಾಗಿ ಲೂತ್ರಾ ಸಹೋದರರು ತಮ್ಮ ವಕೀಲರಾದ ಸಿದ್ಧಾರ್ಥ ಲೂತ್ರಾ ಮತ್ತು ತನ್ವೀರ್ ಅಹ್ಮದ್ ಮಿರ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ತಾವು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗುವ ಭೀತಿಯನ್ನು ಎದುರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಹಾಗಾಗಿ, ಭಾರತಕ್ಕೆ ಬಂದು ಗೋವಾದ ನ್ಯಾಯಾಲಯಗಳಿಗೆ ಹೋಗಲು ಸಾಧ್ಯವಾಗುವಂತಾಗಲು ತಮಗೆ ಬಂಧನದಿಂದ ರಕ್ಷಣೆ ಬೇಕು ಎಂದು ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.

ಘಟನೆಯ ಹೊಣೆಯನ್ನು ತಮ್ಮ ಮೇಲೆ ಹೊರಿಸುವಂತಿಲ್ಲ ಎಂದು ವಾದಿಸಿರುವ ಅವರು, ಕ್ಲಬ್‌ನ ಸ್ಥಳೀಯ ಮ್ಯಾನೇಜರ್‌ ಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ತಾವು ಈ ಕ್ಲಬ್‌ನ ಮಾಲೀಕರಲ್ಲ, ಪರವಾನಿಗೆದಾರರು ಮಾತ್ರ ಎಂದಿರುವ ಅವರು, ಸರಕಾರವು ತಮ್ಮನ್ನು ‘‘ಬೇಟಿಯಾಡುತ್ತಿದೆ’’ ಎಂದು ಹೇಳಿಕೊಂಡಿದ್ದಾರೆ.

ಸೌರಭ್ ಮತ್ತು ಗೌರವ್ ಲೂತ್ರಾ ಈಗ ಥಾಯ್ಲೆಂಡ್‌ ನ ಫುಕೆಟ್ ನಗರದಲ್ಲಿದ್ದಾರೆ. ಶನಿವಾರ ರಾತ್ರಿ ಬೆಂಕಿ ದುರಂತ ನಡೆದ ಬೆನ್ನಿಗೇ ರವಿವಾರ ಮುಂಜಾನೆ ಅವರು ವಿದೇಶಕ್ಕೆ ಪಲಾಯನಗೈದಿದ್ದಾರೆ.

ಅವರನ್ನು ಭಾರತಕ್ಕೆ ಗಡೀಪಾರು ಮಾಡಿಸುವುದಕ್ಕಾಗಿ ಭಾರತೀಯ ಅಧಿಕಾರಿಗಳು ಥಾಯ್ಲೆಂಡ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

*ಬೆಂಕಿ ಸುರಕ್ಷತಾ ಕ್ರಮ ಅನುಸರಿಸದಿದ್ದರೆ ಪರವಾನಿಗೆ ರದ್ದು: ಗೋವಾ ಮುಖ್ಯಮಂತ್ರಿ

ಬೆಂಕಿ ಅಪಘಾತ ತಡೆ ನಿಯಮಗಳನ್ನು ಅನುಸರಿಸದ ಗೋವಾದ ಪ್ರವಾಸಿ ಕಟ್ಟಡಗಳ ಪರವಾನಿಗೆಗಳನ್ನು ರದ್ದುಪಡಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಹೇಳಿದ್ದಾರೆ.

ಸರಕಾರವು ನೇಮಿಸಿರುವ ಬೆಂಕಿ ಸುರಕ್ಷತೆ ಪರಿಶೋಧನಾ ಸಮಿತಿಯು ರಾಜ್ಯದ ಪ್ರವಾಸಿ ಕಟ್ಟಡಗಳಿಗೆ ಭೇಟಿ ನೀಡಲು ಆರಂಭಿಸಿದ್ದು, ತಪಾಸಣೆಗಳನ್ನು ಮುಗಿಸಿದ ಬಳಿಕ ವರದಿ ಸಲ್ಲಿಸಲಿದೆ ಎಂದು ಸಾವಂತ್ ಹೇಳಿದರು.

‘‘ಯಾವುದೇ ಕಟ್ಟಡವು ಬೆಂಕಿ ಸುರಕ್ಷತಾ ನಿಯಮಗಳನ್ನು ಅನುಸರಿಸದಿರುವುದು ಸಮಿತಿಯ ಗಮನಕ್ಕೆ ಬಂದರೆ, ಅವುಗಳ ಪರವಾನಿಗೆಗಳನ್ನು ರದ್ದುಪಡಿಸಲಾಗುವುದು ಮತ್ತು ಅವುಗಳ ಕಟ್ಟಡಗಳಿಗೆ ಬೀಗ ಹಾಕಲಾಗುವುದು ಎಂದು ಅವರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News