ಅತ್ಯಾಚಾರ ಪ್ರಕರಣ ಕೈಬಿಡುವಂತೆ ವಕೀಲೆ ಮೇಲೆ ಒತ್ತಡ ಆರೋಪ: ಜಿಲ್ಲಾ ನ್ಯಾಯಾಧೀಶರನ್ನು ಅಮಾನತುಗೊಳಿಸಿದ ದಿಲ್ಲಿ ಹೈಕೋರ್ಟ್
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಅತ್ಯಾಚಾರ ಪ್ರಕರಣ ಕೈಬಿಡುವಂತೆ ವಕೀಲೆ ಮೇಲೆ ಒತ್ತಡಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಧೀಶರನ್ನು ಅಮಾನತುಗೊಳಿಸಿ, ಮತ್ತೋರ್ವ ನ್ಯಾಯಧೀಶರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ದಿಲ್ಲಿ ಹೈಕೋರ್ಟ್ ಶಿಫಾರಸ್ಸು ಮಾಡಿದೆ.
ವಕೀಲನೋರ್ವನ ವಿರುದ್ಧ ದಾಖಲಿಸಿರುವ ಅತ್ಯಾಚಾರ ಪ್ರಕರಣವನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ ಎಂದು ಜಿಲ್ಲಾ ನ್ಯಾಯಾಧೀಶ ಸಂಜೀವ್ ಕುಮಾರ್ ಸಿಂಗ್ ಮತ್ತು ನ್ಯಾಯಾಧೀಶ ಅನಿಲ್ ಕುಮಾರ್ ವಿರುದ್ಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ರಿಜಿಸ್ಟ್ರಾರ್ ಜನರಲ್ ಅವರಿಗೆ ವಕೀಲೆ ದೂರು ಸಲ್ಲಿಸಿದ್ದರು. ನಂತರ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು.
ದಾಖಲೆಗಳ ಪ್ರಕಾರ, 27ರ ಹರೆಯದ ವಕೀಲೆ ದಿಲ್ಲಿಯಲ್ಲಿ ಓರ್ವ ವಕೀಲರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ನ್ಯಾಯಾಧೀಶರಾದ ಸಿಂಗ್ ಮತ್ತು ಕುಮಾರ್ ಅವರು ಆರೋಪಿ ವಕೀಲನ ಪರವಾಗಿ ನಿಂತುಕೊಂಡಿದ್ದಾರೆ. ಪ್ರಕರಣವನ್ನು ಮುಂದುವರಿಸಬಾರದು ಎಂದು ಇಬ್ಬರು ನ್ಯಾಯಾಧೀಶರು ಒತ್ತಡ ಹಾಕಿದ್ದರು ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಹೈಕೋರ್ಟ್ ವೀಕ್ಷಣಾ ಸಮಿತಿಯ ಮುಂದೆ ನ್ಯಾಯಮೂರ್ತಿ ಸಂಜೀವ್ ಕುಮಾರ್ ಮತ್ತು ಅನಿಲ್ ಕುಮಾರ್ ಅವರು ಹಾಜರಾಗಿದ್ದರು. ದೂರುಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು. ಇಬ್ಬರೂ ತಪ್ಪು ಮಾಡಿಲ್ಲ ಎಂದು ಹೇಳಿದರೂ, ದೂರುದಾರೆ ಸಲ್ಲಿಸಿದ ಆಡಿಯೋ ದಾಖಲೆಯೊಂದಕ್ಕೆ ಸಿಂಗ್ ಯಾವುದೇ ಸ್ಪಷ್ಟನೆ ನೀಡಲಿಲ್ಲ. ಆದ್ದರಿಂದ ವಿಚಾರಣೆ ಪೂರ್ಣಗೊಳ್ಳುವವರೆಗೆ ಇಬ್ಬರು ನ್ಯಾಯಾಧೀಶರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಮಿತಿಯು ಶಿಫಾರಸು ಮಾಡಿತ್ತು.